ಕಲಬುರಗಿ: ನಂದಿಕೂರ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತೆಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ವರದಿಯಾಗಿದೆ.
ಮೃತರನ್ನು ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ನಿವಾಸಿ ಜ್ಯೋತಿ ಪಾಟೀಲ್ (35) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಜ್ಯೋತಿ ಪಾಟೀಲ್ ಅವರು ನಂದಿಕೂರ ಗ್ರಾಮದ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆಗೆ ತೆರಳಿದ್ದರು.
ಮಲ್ಲಿನಾಥ್ ಬಿರಾದಾರ್ ಕೂಡ ಬಿಜೆಪಿ ಕಾರ್ಯಕರ್ತನಾಗಿದ್ದು, ಆತ ಮನೆಯಲ್ಲಿ ಇಲ್ಲದ ಸಮಯದಲ್ಲಿ ಜ್ಯೋತಿ ಮನೆಗೆ ಹೋಗಿ ಬಾಗಿಲು ಬಡಿದಿದ್ದಾರೆ. ಮಲ್ಲಿನಾಥ್ ಪತ್ನಿ ಬಾಗಿಲು ತೆರೆದ ತಕ್ಷಣ, ಜ್ಯೋತಿ ಪಾಟೀಲ್ ಮೊದಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ.
ಮೃತ ಜ್ಯೋತಿ ಪಾಟೀಲ್ ವಿವಾಹಿತೆಯಾಗಿದ್ದು. ಇತ್ತ ಮಲ್ಲಿನಾಥ್ ಬಿರಾದಾರ್ ಕೂಡ ವಿವಾಹಿತನಾಗಿದ್ದು, ಹೆಂಡತಿ ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಜ್ಯೋತಿ ಪಾಟೀಲ್ ಅವರು ರಾತ್ರಿ ವೇಳೆ ಮಲ್ಲಿನಾಥ್ ಮನೆಗೆ ಏಕೆ ಹೋಗಿದ್ದರು ಎನ್ನುವುದು ಸದ್ಯಕ್ಕೆ ನಿಗೂಢವಾಗಿದೆ.
ಈ ಸಾವಿನ ಹಿಂದೆ ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗುತ್ತಿದ್ದು, ಇದು ವ್ಯವಸ್ಥಿತ ಕೊಲೆ ಎಂದು ಜ್ಯೋತಿಯ ಕುಟುಂಬಸ್ಥರು ದೂರಿದ್ದಾರೆ. ಈ ಘಟನೆ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆ ಫರಹತಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.