ಶಿವಮೊಗ್ಗ: ಮಲೆನಾಡು ಪ್ರದೇಶದ ರೈತರು, ಅರಣ್ಯವಾಸಿಗಳು ಹಾಗೂ ಗ್ರಾಮೀಣ ಸಮುದಾಯಗಳು ವರ್ಷಗಳಿಂದ ಎದುರಿಸುತ್ತಿರುವ “ಮಂಗನ ಕಾಯಿಲೆ (KFD) ಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ದೊರಕಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ರಾಘವೇಂದ್ರ ಭೇಟಿಯಾಗಿದ್ದು, ಸಮಗ್ರ ಚರ್ಚೆ ನಡೆಸಿದ್ದಾರೆ.
ಮಂಗನ ಕಾಯಿಲೆಯಿಂದ ಆಗುತ್ತಿರುವ ಜೀವ ಹಾನಿ ಹಾಗೂ ಜನಜೀವನದ ಮೇಲೆ ಬೀರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ, ಪರಿಣಾಮಕಾರಿ ಲಸಿಕೆ ಅಭಿವೃದ್ಧಿಗೆ ತ್ವರಿತ ಕ್ರಮ, ICMR ಹಾಗೂ NIV ಮೂಲಕ ಸಂಶೋಧನೆಗೆ ವೇಗ, ಶಿವಮೊಗ್ಗದಲ್ಲಿ NIV ಉಪ-ಕೇಂದ್ರ ಸ್ಥಾಪನೆ ಮತ್ತು ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆ ಕುರಿತು ಕೇಂದ್ರ ಸಚಿವರ ಗಮನಕ್ಕೆ ತಂದಿರುವುದಾಗಿ ಅವರು ತಿಳಿಸಿದ್ದಾರೆ.
ಮಲೆನಾಡಿನ ಜನರು ಇನ್ನು ಮುಂದೆ ಭಯದಲ್ಲಿ ಬದುಕುವ ಪರಿಸ್ಥಿತಿ ಬಾರದಂತೆ, “ಒಂದು ಆರೋಗ್ಯ” (One Health) ದೃಷ್ಟಿಕೋನದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಸುವಂತೆ ಮನವಿ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
ಮಂಗನ ಕಾಯಿಲೆ ನಿರ್ಮೂಲನೆಗೆ ಅಗತ್ಯವಾದ ವೈಜ್ಞಾನಿಕ ನೆರವು, ಆರ್ಥಿಕ ಬೆಂಬಲ ಹಾಗೂ ಎಲ್ಲಾ ಅಗತ್ಯ ಕ್ರಮಗಳನ್ನು ಅತ್ಯಂತ ಶೀಘ್ರವಾಗಿ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದಿಂದ ಖಚಿತ ಭರವಸೆ ನೀಡಲಾಗಿದೆ. ಈ ಮಹತ್ವದ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿರುವುದಾಗಿ ಸಂಸದರು ತಿಳಿಸಿದ್ದಾರೆ.