ಬೆಂಗಳೂರು: ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಮಸೂದೆ ಹೆಸರಿನಲ್ಲಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತುಪರಿಸ್ಥಿತಿ ಜಾರಿಗೆ ಮುಂದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳ ಭಾರಿ ವಿರೋಧದ ಮಧ್ಯೆ ಸರ್ಕಾರವು ವಿಧಾನಮಂಡಲದಲ್ಲಿ ಈ ಮಸೂದೆಗೆ ಅಂಗೀಕಾರ ಪಡೆದುಕೊಂಡಿದೆ. ಆದರೆ ಈ ಮಸೂದೆಗೆ ಅಂಕಿತ ಹಾಕಬೇಡಿ ಎಂದು ಕೋರಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ರಕ್ಷಿಸುವಂತೆ ರಾಷ್ಟ್ರಪತಿಗಳಿಗೂ ಕೂಡ ಮನವಿ ಮಾಡುತ್ತೇನೆಂದು ಹೇಳಿದ್ದಾರೆ.
ದ್ವೇಷ ಭಾಷಣವನ್ನು ತಡೆಗಟ್ಟಲು ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಸಾಕಷ್ಟು ನಿಬಂಧನೆಗಳಿರುವುದರಿಂದ ಹೊಸ ಮಸೂದೆಯ ಅಗತ್ಯವಿಲ್ಲ. ಈಗಿರುವ ಕಾಯ್ದೆಗಳಲ್ಲಿಯೇ ಸಾಕಷ್ಟು ನಿರ್ಬಂಧಗಳಿವೆ, ದ್ವೇಷ ಭಾಷಣ ನಿಲ್ಲಿಸಲು ಡಿಪ್ಯೂಟಿ ಕಮಿಷನರ್ ಅಥವಾ ಪೊಲೀಸ್ ಸುಪರಿಂಟೆಂಡೆಂಟ್ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.
ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ಆರೋಪ ಮಾಡಿದರೆ ಅವರಿಗೆ ಹೆಚ್ಚು ಅಧಿಕಾರ ನೀಡುವ ಹೊಸ ಕಾಯ್ದೆ ಬಳಸಿ 10 ವರ್ಷ ಜೈಲು ಶಿಕ್ಷೆ ನೀಡುತ್ತಾರೆ. ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿಸಬಹುದು. ಇದು ಕಾಂಗ್ರೆಸ್ ವಿರುದ್ಧ ಮಾತನಾಡುವವ ರಾಜಕೀಯ ಜೀವನ ಅಂತ್ಯಗೊಳಿಸಲು ಯೋಜಿಸಿರುವ ಪಿತೂರಿಯಾಗಿದೆ.
ಹೊಸ ಕಾಯ್ದೆ ಕನ್ನಡಪರ ಹೋರಾಟಗಾರರು, ಗೃಹ ಲಕ್ಸ್ಮಿ ಯೋಜನೆಯ ಹಣ ಬಿಡುಗಡೆ ವಿಳಂಬದ ಬಗ್ಗೆ ಪ್ರಶ್ನೆ ಮಾಡುವ ಮಹಿಳೆಯರು, ಉದ್ಯೋಗಕ್ಕಾಗಿ ಹೋರಾಟ ಮಾಡುವ ಯುವಕರು ಅಥವಾ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವವರ ವಿರುದ್ಧ ಬಳಕೆಯಾಗಬಹುದು ಎಂದು ತಿಳಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಲೇ ಇದೆ. ಫ್ಯಾಕ್ಟ್‌ಚೆಕ್ ಹೆಸರಿನಲ್ಲಿ ಜನರ ಬಾಯಿಮುಚ್ಚಿಸಲು ಏಜೆನ್ಸಿ ಒಂದನ್ನು ತೆರೆದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರು, ಖಾಸಗಿ ವ್ಯಕ್ತಿಗಳು, ಸರ್ಕಾರದ ಪರವಾದ ಸಂಸ್ಥೆಗಳನ್ನು ಈ ಏಜೆನ್ಸಿಯಲ್ಲಿ ಕೂರಿಸಿದೆ. ಅದರ ಮುಂದುವರೆದ ಭಾಗವಾಗಿ ಈ ಮಸೂದೆ ತರುತ್ತಿದೆ ಎಂದು ಆರೋಪಿಸಿದರು.
‘ಫ್ಯಾಕ್ಟ್‌ಚೆಕ್ ಏಜೆನ್ಸಿಯಲ್ಲಿ ಟೊಯೊಲಿಕಾ ಟೆಕ್ನಾಲಜೀಸ್‌ನ ಸಾಗರ್ ಮಿಶ್ರಾ, ರಾಜ್‌ಟೆಲ್‌ನ ಗೋವಿಂದ ರೆಡ್ಡಿ, ಸೈಕತ್ ರಾಯ್, ಗೌರಿ ಮೀಡಿಯಾ ಟ್ರಸ್ಟ್‌ನ ಗುರುಪ್ರಸಾದ್ ಡಿ.ಎನ್. ಮತ್ತು ನ್ಯೂಸ್ ಪ್ಲಸ್‌ನ ಪುನೀತ್ ಇದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದರೆ, ಇವರು ಸರ್ಕಾರಕ್ಕೆ ವರದಿ ಕೊಡುತ್ತಾರೆ. ಆಗ ಸರ್ಕಾರ ಪ್ರಕರಣ ದಾಖಲಿಸುತ್ತಿದೆ. ನಮ್ಮ ಹಲವು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಂದು ದೂರಿದರು.