ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ  
ರಾಜ್ಯ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ, ಗಾಯಾಳುಗಳಿಗೆ 50 ಸಾವಿರ ರೂ.ಪರಿಹಾರ: ಸಿದ್ದರಾಮಯ್ಯ, ಐವರ ಮೃತದೇಹ ಗುರುತು ಪತ್ತೆ

ಅಪಘಾತದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸಂಪೂರ್ಣ ವರದಿ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಕನಿಷ್ಠ 9 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಟ್ರಾವೆಲ್ಸ್‌ನ ಸ್ಲೀಪರ್ ಬಸ್‌ಗೆ ಎದುರಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್ ದಾಟಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಈ ದುರಂತದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು

ಅಪಘಾತದ ಬಗ್ಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸಂಪೂರ್ಣ ವರದಿ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯ ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು ನೀಡಲಾಗುವುದು. ಇದರ ಜೊತೆಗೆ, ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ಒಟ್ಟು 7 ಲಕ್ಷ ರೂಪಾಯಿ ನೆರವು ದೊರೆಯಲಿದೆ.

ಗಾಯಾಳುಗಳಿಗೆ ತಲಾ 50 ಸಾವಿರ ಘೋಷಣೆ

ಗಾಯಾಳುಗಳ ಸ್ಥಿತಿಯನ್ನು ಗಮನಿಸಿ ರಾಜ್ಯ ಸರ್ಕಾರದಿಂದ ತಲಾ 50 ಸಾವಿರ ರೂಪಾಯಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಹಿರಿಯೂರು, ಚಿತ್ರದುರ್ಗ ಮತ್ತು ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಬರ್ನ್ ವಾರ್ಡ್‌ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ತನಿಖೆಯಲ್ಲಿ ಲಾರಿ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಮುಖ್ಯ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಡಿವೈಡರ್ ದಾಟಿ ಬಸ್‌ಗೆ ತೀವ್ರವಾಗಿ ಡಿಕ್ಕಿ ಹೊಡೆದಿದೆ. ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಬಸ್‌ಗೆ ಹರಡಿತು. ಬಸ್ ಚಾಲಕ, ಕಂಡಕ್ಟರ್ ಮತ್ತು ಕ್ಲೀನರ್ ಮೂವರು ಕಿಟಕಿ ಮೂಲಕ ಹೊರಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದ ಕಾರಣ ಹೊರಬರಲು ಆಗಲಿಲ್ಲ.

ಮೃತರ ಡಿಎನ್ ಎ ಪರೀಕ್ಷೆ

ಮೃತರ ಗುರುತು ದೃಢೀಕರಣಕ್ಕೆ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಕೆಲವರ ಕುಟುಂಬಸ್ಥರು ಇನ್ನೂ ಸಂಪರ್ಕಕ್ಕೆ ಸಿಗದೇ ಆತಂಕದಲ್ಲಿದ್ದಾರೆ. ಮಾವಳ್ಳಿ ತಂಡದಲ್ಲಿ ಬಿಂದು ಮತ್ತು ಅವರ ಐದು ವರ್ಷದ ಮಗುವಿನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದುವರೆಗೆ 5 ಮಂದಿ ಮೃತರ ಗುರುತು ಪತ್ತೆಹಚ್ಚಲಾಗಿದೆ ಎಂದಿದ್ದಾರೆ.

ತನಿಖಾ ವರದಿ ಕೇಳಿದ ರಾಮಲಿಂಗಾರೆಡ್ಡಿ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವೇಗವಾಗಿ ಬರುತ್ತಿದ್ದ ಲಾರಿಯೊಂದು ರಸ್ತೆ ವಿಭಜಕವನ್ನು ಹಾರಿ ಬಸ್‌ಗೆ ಡಿಕ್ಕಿ ಹೊಡೆದಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಸಾರಿಗೆ ಆಯುಕ್ತರಾದ ಯೋಗೇಶ್ವರ್ ಹಾಗೂ ಸಹಾಯಕ ಆಯುಕ್ತರಾದ ಓಂಕಾರೇಶ್ವರಿ ಅವರು ಹೋಗುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ ಸುಧಾಕರ್ ಕೂಡ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

ಕ್ರಿಸ್ಮಸ್ ರಜೆಯಲ್ಲಿ ಊರಿಗೆ ಹೋಗುತ್ತಿದ್ದವರ ಬಾಳಲ್ಲಿ ದುರಂತ

ಈ ದುರ್ಘಟನೆ ಇಂದು ನಸುಕಿನ ಜಾವ ಎರಡೂವರೆ ಸುಮಾರಿಗೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಬಸ್‌ನಲ್ಲಿ ಸುಮಾರು 25ರಿಂದ 30 ಪ್ರಯಾಣಿಕರು ಇದ್ದರು. ಹೆಚ್ಚಿನವರು ಗೋಕರ್ಣದವರೇ ಆಗಿದ್ದು, ಕ್ರಿಸ್ಮಸ್ ರಜೆಯಲ್ಲಿ ಊರಿಗೆ ಹೋಗುತ್ತಿದ್ದವರು ಈ ದುರಂತಕ್ಕೀಡಾಗಿದ್ದಾರೆ. ಬೆಂಗಳೂರಿನ ಮಾವಳ್ಳಿ ಪ್ರದೇಶದ ಗೆಳೆಯರ ತಂಡ, ಭಟ್ಕಳ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರಶ್ಮಿ ಸೇರಿದಂತೆ ಹಲವರು ಬಸ್‌ನಲ್ಲಿದ್ದರು.

ಸಹಾಯವಾಣಿ

ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೆಲ್ಪ್ ಲೈನ್ ಪ್ರಕಟಣೆ ಮಾಡಲಾಗಿದೆ ಎಂದು ಚಿತ್ರದುರ್ಗದ ಎಸ್ಪಿ ರಂಜಿತ್ ಬಂಡಾರು ಮಾಹಿತಿ ನೀಡಿದ್ದಾರೆ. ಸಾರ್ವಜನಿಕರ ಈ ಹೆಲ್ಪ್‌ಲೈನ್ ನಂಬರ್ 9480803100, 08194222782, 9480803170 ಗೆ ತುರ್ತು ಸಹಾಯವನ್ನು ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿತ್ರದುರ್ಗ: ಖಾಸಗಿ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ, ಬೆಂಕಿ​​​​; 9 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ; ತನಿಖೆಗೆ ಆದೇಶ; Video

ಚಿತ್ರದುರ್ಗ ಬಸ್ ದುರಂತ: ಸಿಎಂ ಸಿದ್ದರಾಮಯ್ಯ-ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ

ಅಮೆರಿಕದಲ್ಲಿ Sun Pharma ಗೆ ಶಾಕ್: 17,000ಕ್ಕೂ ಹೆಚ್ಚು ಯೂನಿಟ್ ಆಂಟಿಫಂಗಲ್ ಶಾಂಪೂ ಹಿಂದಕ್ಕೆ!

'ಮದ್ಯದಂಗಡಿ ಹರಾಜು' ರಾಜ್ಯ ಸರ್ಕಾರದ ಹೊಸ ವರ್ಷದ ಕೊಡುಗೆ: ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ!

ಇಂದಿರಾ ಕ್ಯಾಂಟೀನ್ ನಂತೆ ದೆಹಲಿಯಲ್ಲಿ 100 'ಅಟಲ್ ಕ್ಯಾಂಟೀನ್' ಆರಂಭ! ಕೇವಲ 5 ರೂ. ಗೆ ಥಾಲಿ: ಮೆನುವಿನಲ್ಲಿ ಏನಿದೆ ಗೊತ್ತಾ?

SCROLL FOR NEXT