ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಮೀಪದ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಹೆಣ್ಣು ಹುಲಿಯೊಂದು ಗುಂಡ್ಲುಪೇಟೆ ತಾಲ್ಲೂಕಿನ ದೇಪಾಪುರ ಗ್ರಾಮದಲ್ಲಿಟ್ಟ ಬೋನಿನಲ್ಲಿ ಸೆರೆಯಾಗಿದೆ.
ಹುಲಿಯ ಚಲನವಲನದಿಂದ ದೇಪಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ಇದರಂತೆ ದೇಪಾಪುರ ಸೇರಿದಂತೆ ಹಲವಾರು ಗ್ರಾಮಗಳ ಜನರ ಒತ್ತಾಯದ ಮೇರೆಗೆ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಬೋನಿರಿಸಿದ್ದರು.
ಇದೀಗ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನ್ ಗೆ ಹುಲಿ ಬಿದ್ದಿದ್ದು, ದೂರದಿಂದಲೇ ಹುಲಿಯನ್ನು ವೀಕ್ಷಿಸಿದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹೆಚ್ಚೆಚ್ಚು ಜನರು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಹುಲಿಯ ಆರೋಗ್ಯ ಹಾಗೂ ವರ್ತನೆ ಪರಿಶೀಲನೆಯ ನಂತರ ಹುಲಿಯನ್ನು ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದರು.