ಉಡುಪಿ: ತುರ್ತು ನಿರ್ಗಮನ ದ್ವಾರಗಳು (ಎಮರ್ಜೆನ್ಸಿ ಡೋರ್) ಇಲ್ಲದ ದೀರ್ಘ ಮಾರ್ಗ ಬಸ್‌ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೈಂದೂರಿನಲ್ಲಿ ನೂತನ ಸರ್ಕಾರಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ತುರ್ತು ನಿರ್ಗಮನ ದ್ವಾರಗಳು (ಎಮರ್ಜೆನ್ಸಿ ಡೋರ್) ಇಲ್ಲದ ದೀರ್ಘ ಮಾರ್ಗ ಬಸ್‌ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗುವುದಿಲ್ಲ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಲಗೇಜ್ ಗಳ ಹೊರತಾಗಿ ಯಾವುದೇ ಇತರೆ ವಸ್ತುಗಳ ಸಾಗಿಸಲು ಅವಕಾಶವಿಲ್ಲ. ಬಸ್ ಸಂಚಾಲಕರು ತುರ್ತು ನಿರ್ಗಮನ ದ್ವಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಬೈಂದೂರು ಬಸ್ ನಿಲ್ದಾಣವನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದರೂ, ಇಂಟರ್‌ಲಾಕಿಂಗ್ ಇಟ್ಟಿಗೆಗಳ ಅಳವಡಿಕೆ ಹಾಗೂ ನೀರು ಸರಬರಾಜು ಸಂಪರ್ಕ ಸೇರಿದಂತೆ ಕೆಲವು ನಾಗರಿಕ ಕಾಮಗಾರಿಗಳು ಬಾಕಿ ಉಳಿದಿದ್ದರಿಂದ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಬಸ್ ನಿಲ್ದಾಣವನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆ ಯಾವದೇ ಕಾರಣಕ್ಕೂ ಹಾನಿಯಾಗದಂತೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. 2013ರಲ್ಲಿ ಹಾವೇರಿಯಲ್ಲಿ ನಡೆದ ಅಪಘಾತದ ನಂತರ, ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ 25,000 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಲಾಗಿದೆ. ಆ ನಂತರ ಇತರ ಎಲ್ಲ ಬಸ್‌ಗಳಿಗೂ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಏಕಾಏಕಿ ಪ್ರಾಬಲ್ಯ ಹೆಚ್ಚಾಗಿರುವ ಕುರಿತು ಪ್ರತಿಕ್ರಿಯಿಸಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಬಿಡಲು ಸಂಸ್ಥೆ ಸಿದ್ಧವಿದೆ. ಆದರೆ, ಕೆಎಸ್‌ಆರ್‌ಟಿಸಿಗೆ ನೀಡಲಾದ ಮಾರ್ಗ ಅನುಮತಿಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲಾಗುತ್ತಿರುವುದರಿಂದ ಬಸ್ ಸಂಚಾರಕ್ಕೆ ಅಡೆತಡೆ ಎದುರಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ನೌಕರರ ವೇತನ ಪರಿಷ್ಕರಣೆ ಬೇಡಿಕೆ ಕುರಿತು ಮಾತನಾಡಿ, ಕಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಯುತ್ತಿದೆ ಎಂದರು.
ಫಕೀರ್ ಕಾಲೋನಿ ಮತ್ತು ವಸೀಂ ಲೇಔಟ್‌ನಲ್ಲಿ ನಡೆದ ಮನೆಗಳ ತೆರವು ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಕುರಿತು ಪೂರ್ಣ ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಕೇರಳ ಮುಖ್ಯಮಂತ್ರಿ ತಮ್ಮ ರಾಜ್ಯದ ವಿಚಾರ ನೋಡಿಕೊಳ್ಳಲಿ. ನಾವು ನಮ್ಮ ರಾಜ್ಯವನ್ನು ನಿರ್ವಹಿಸುತ್ತೇವೆಂದು ತಿರುಗೇಟು ನೀಡಿದರು.
ಇದೇ ವೇಳೆ 2028ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂಬ ವಿಪಕ್ಷಗಳ ಹೇಳಿಕೆ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗಳಿಗೆ ಸಚಿವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು