ಬೆಂಗಳೂರು: ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಇದೇ ಮೊದಲ ಬಾರಿಗೆ ಬಾರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲಿ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು.
ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 2 ರಂದು ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನಂತರ ಉಪ ಲೋಕಾಯುಕ್ತರು ಈ ಕ್ರಮ ಕೈಗೊಂಡಿದ್ದಾರೆ. ಈಗ ಅವರು ಜಿಲ್ಲಾಡಳಿತ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಇಡೀ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ.
ಇದು ಕೇವಲ ಆರಂಭವಾಗಿದೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಜಿಲ್ಲಾ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಸುಧಾರಣೆಗಳನ್ನು ತರಲು, ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಸರಿಪಡಿಸಲು ತುಮಕೂರು ಮತ್ತು ಮಂಡ್ಯದಂತಹ ಜಿಲ್ಲೆಗಳಲ್ಲಿ ಮುಂದಿನ ಕ್ರಮ ಆರಂಭಿಸಲು ಯೋಜಿಸಿದ್ದಾರೆ.
ಚರಂಡಿಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು, ಬೀದಿ ದೀಪಗಳು, ಘನತ್ಯಾಜ್ಯ ನಿರ್ವಹಣೆ, ಮಾಲಿನ್ಯ ಮತ್ತು ಅತಿಕ್ರಮಣದಿಂದ ಜಲಮೂಲಗಳ ಸಂರಕ್ಷಣೆ ಮತ್ತು ಅಕ್ರಮ ಗಣಿಗಾರಿಕೆ ಮತ್ತಿತರ ವಿಷಯಗಳ ಕುರಿತು ನ್ಯಾಯಮೂರ್ತಿ ವೀರಪ್ಪ ಅವರು ಪರಿಶೀಲಿಸುತ್ತಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು, ಡೇಟಾ ಎಂಟ್ರಿ ಆಪರೇಟರ್‌ಗಳು, ತಾಂತ್ರಿಕ ಸಹಾಯಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಮತ್ತು ಗ್ರಾಮ ಪಂಚಾಯಿತಿಗಳ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಿರಿಯ ಎಂಜಿನಿಯರ್‌ಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಇಬ್ಬರು PDO ಅಮಾನತು: ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರ್ವೇಶ್ ಕೆ ವಿರುದ್ಧವೂ ದೂರು ದಾಖಲಾಗಿದೆ. ಇಬ್ಬರು PDO ಗಳನ್ನು ಅಮಾನತುಗೊಳಿಸಲಾಗಿದೆ. ಬೋರ್‌ವೆಲ್ ದುರಸ್ತಿಗಾಗಿ ಗುತ್ತಿಗೆದಾರರಿಗೆ 68 ಲಕ್ಷ ರೂ. ದುರ್ಬಳಕೆ ಮತ್ತು 6.69 ಲಕ್ಷ ರೂ. ಬಿಡುಗಡೆ ಮಾಡದ ಅರಿಕುಂಟೆ PDO ಎ.ಎನ್.ಶಂಕರಪ್ಪ ಮತ್ತು ಕರ್ತವ್ಯ ಲೋಪಕ್ಕಾಗಿ ನಂಬಿಹಳ್ಳಿ PDO ಮಂಜುನಾಥ್ ಎನ್.ಕೆ ಅವರನ್ನು ಅಮಾನತುಗೊಳಿಸಲಾಗಿದೆ.
ಮಾಡದ ಕಾಮಗಾರಿಗಳಿಗೆ ಹಣ ಬಿಡುಗಡೆ: ದಳಸನೂರು ಗ್ರಾ.ಪಂ.ನಲ್ಲಿ 2019-2020ರಲ್ಲಿ ರಸ್ತೆ ನಿರ್ಮಾಣಕ್ಕೆ 3 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ ಅದು ಅಸ್ತಿತ್ವದಲ್ಲಿಲ್ಲ. ಚರಂಡಿಗಳ ಹೂಳು ತೆಗೆಯಲು ಹಣ ಪಾವತಿಸಲಾಗಿದೆ ಆದರೆ ಯಾವುದೇ ಕೆಲಸ ಮಾಡಿಲ್ಲ ಎಂದು ದೂರುದಾರರೊಬ್ಬರು ಉಲ್ಲೇಖಿಸಿದ್ದಾರೆ. ಅಲ್ಲದೇ ಮನ್ರೇಗಾ ಅಡಿಯಲ್ಲಿ ಮಾಡದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. 15ನೇ ಹಣಕಾಸು ಕಾರ್ಯಕ್ರಮದಡಿ ಚರಂಡಿಗಳ ಸ್ವಚ್ಛತೆ ಮತ್ತು ನೈರ್ಮಲ್ಯ ನಿರ್ವಹಣೆಗೆ ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸಿಲ್ಲ. ಆರರಲ್ಲಿ ಮೂರು ಕೆರೆಗಳು ಒತ್ತುವರಿಯಾಗಿದ್ದು, ಕಾಮಗಾರಿ ಅನುಷ್ಠಾನಕ್ಕೆ ಕೊಟೇಶನ್ ಇಲ್ಲದೇ ಬಿಲ್ ಕ್ಲಿಯರ್ ಮಾಡಲಾಗಿದೆ.
10,000 ರೂ.ಗಿಂತ ಹೆಚ್ಚಿನ ವೆಚ್ಚಕ್ಕೆ ಟೆಂಡರ್ ಆಹ್ವಾನಿಸಬೇಕು ಎಂಬ ಆದೇಶ ಇದ್ದರೂ ಪ್ರತಿ ತಿಂಗಳು ಆ ಹಣಕ್ಕೆ ಎರಡರಿಂದ ನಾಲ್ಕು ಬಿಲ್‌ಗಳನ್ನು ಮಾಡಲಾಗಿದೆ. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಬಿಡುಗಡೆಯಾದ ಅನುದಾನ, ವಿಕಲಚೇತನರು ಮತ್ತು ಮೇಕೆ ಮತ್ತು ಗೋಶಾಲೆಗಳ ನಿರ್ಮಾಣದ ಬಗ್ಗೆ ಯಾವುದೇ ವಿವರಗಳನ್ನು ಒದಗಿಸಲಾಗಿಲ್ಲ.
ಉದ್ಯೋಗಿಗಳ ಸಂಬಳಕ್ಕಿಂತ ಹೆಚ್ಚಿನ ವಹಿವಾಟು: ಉದ್ಯೋಗಿಗಳ ಫೋನ್ ನಲ್ಲಿರುವ ಡಿಜಿಟಲ್ ಪೇಮೆಂಟ್ ಆಪ್ ಗಳನ್ನು ಪರಿಶೀಲಿಸಿದಾಗ ನಿಜವಾದ ಸಂಬಳಕ್ಕಿಂತ ಹೆಚ್ಚಿನ ವಹಿವಾಟು ನಡೆದಿರುವುದು ಕಂಡುಬಂದಿದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆದಿರುವ ಕಾಮಗಾರಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ರಸ್ತೆಗಳು ಮತ್ತು ಕಸ ಸಂಗ್ರಹಿಸುವ ವಾಹನಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಬೋರ್‌ವೆಲ್‌ಗಳ ನಿರ್ವಹಣೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ.
ಸರ್ವೇಶ್ ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993 ರ ಸೆಕ್ಷನ್ 232 (ಎ) ಅನ್ನು ಉಲ್ಲಂಘಿಸಿದ್ದಾರೆ ಎಂದು ಉಪ ಲೋಕಾಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.