ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿ ತಯಾರಿಸಿದ ಮುಂದಿನ ಪೀಳಿಗೆಯ 'ಧ್ರುವ್ ಎನ್‌ಜಿ' ಹೆಲಿಕಾಪ್ಟರ್ ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಬೆಂಗಳೂರಿನಲ್ಲಿ ಇಂದು ಹಸಿರು ನಿಶಾನೆ ತೋರಿದ್ದಾರೆ. ಧ್ರುವ್ ಎನ್‌ಜಿ' ಹಗುರವಾದ ಎರಡು 1H1C ಎಂಜಿನ್‌ಗಳಿಂದ ಚಾಲಿತ ಬಹು-ಪಾತ್ರ ಹೆಲಿಕಾಪ್ಟರ್ ಆಗಿದ್ದು, ಇದು ಕೇವಲ 5.5 ಟನ್ ತೂಕವಿದ್ದು, ಭಾರತೀಯ ಭೂಪ್ರದೇಶದ ವೈವಿಧ್ಯಮಯ ಮತ್ತು ಸವಾಲಿನ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ವೇಗ ಗಂಟೆಗೆ ಸುಮಾರು 285 ಕಿಮೀ, ಗರಿಷ್ಠ 14 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಚೊಚ್ಚಲ ಉದ್ಘಾಟನಾ ಹಾರಾಟವನ್ನು ವೀಕ್ಷಿಸಿದ ನಂತರ ಮಾತನಾಡಿದ ಸಚಿವ ರಾಮ್ ಮೋಹನ್ ನಾಯ್ಡು, ಈ ಅಭಿವೃದ್ಧಿ ದೇಶೀಯ ಬಾಹ್ಯಾಕಾಶ ಉತ್ಪಾದನೆಯಲ್ಲಿ ಭಾರತದ ಬೆಳೆಯುತ್ತಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಧ್ರುವ-ಎನ್‌ಜಿ ಕೇವಲ ಒಂದು ಯಂತ್ರವಲ್ಲ, ಆದರೆ ಆತ್ಮನಿರ್ಭರ ಭಾರತಕ್ಕೆ ಭಾರತದ ಸಾಮರ್ಥ್ಯ, ವಿಶ್ವಾಸ ಮತ್ತು ಬದ್ಧತೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಹೊಸ ವರ್ಷ ಬರಮಾಡಿಕೊಳ್ಳಲು ಎರಡು ದಿನಗಳ ಮಾತ್ರ ಬಾಕಿ ಉಳಿದಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರು ಸಂಪೂರ್ಣ ಅಲರ್ಟ್ ಆಗಿದ್ದಾರೆ. ಹೊಸ ವರ್ಷಾಚರಣೆಯ ವೇಳೆ ಪ್ರಯಾಣಿಕರಿಗೆ ಅನುಕೂಲವಾಗಲು ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಸೇವಾ ಸಮಯವನ್ನ ವಿಸ್ತರಿಸಿದೆ. ಕೆಲವು ಮಾರ್ಗಗಳಲ್ಲಿ ಕೊನೆಯ ರೈಲುಗಳು ಬೆಳಗಿನ ಜಾವ 3.10 ರವರೆಗೆ ಚಲಿಸುತ್ತವೆ. ಎಂಜಿ ರಸ್ತೆ ನಿಲ್ದಾಣವು ರಾತ್ರಿ 10 ರಿಂದ ಮುಚ್ಚಲಿದೆ. ಮೆಜೆಸ್ಟಿಕ್ನಲ್ಲಿ ರಾತ್ರಿ 2.45ಕ್ಕೆ ಕೊನೆಯ ರೈಲು ಇರಲಿದೆ. ಜನ ಹೆಚ್ಚು ಸೇರುವುದರಿಂದ ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಕೌಂಟರ್ನಲ್ಲಿ ಟಿಕೆಟ್ ಸಿಗುವುದಿಲ್ಲ. ಈ ಸಮಯದಲ್ಲಿ ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಸ್ಟೇಷನ್ನಲ್ಲಿ ಕೌಂಟರ್ ಕ್ಲೋಸ್ ಆಗಲಿದ್ದು, ಕ್ಯೂ ಆರ್ ಕೋಡ್ ಬಳಸಿ ಪ್ರಯಾಣ ಮಾಡಬೇಕು ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಅಕ್ರಮವಾಗಿ ಒತ್ತುವರಿ ಯಾರೂ ಮಾಡಬಾರದು. ಕೋಗಿಲು ಲೇಔಟ್ ನಲ್ಲಿ ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡುವುದಕ್ಕೆ ನಾವು ತಯಾರಿಲ್ಲ. ಯಾವ ರೀತಿಯಲ್ಲೂ ಓಲೈಕೆ ರಾಜಕಾರಣ ಮಾಡುವಂತಹ ಪ್ರಶ್ನೆ ಬರುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಂಮರ ಓಲೈಕೆ ಮಾಡಲಾಗುತ್ತಿದೆ ಎನ್ನುವ ಪ್ರತಿಪಕ್ಷದ ಟೀಕೆಗಳ ಬಗ್ಗೆ ಕೇಳಿದಾಗ, ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಅಲ್ಲಿನವರೇ ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ನೈಜ ಮತದಾರರು ಎಷ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಡಿಸಿಎಂ ಹೇಳಿದ್ದಾರೆ.
ಪಿಜಿಯೊಂದರ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡಿರು ಘಟನೆ ನಗರದ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಅರವಿಂದ್ (23) ಮೃತ ಯುವಕ. ಘಟನೆಯಲ್ಲಿ ವೆಂಕಟೇಶ್, ವಿಶಾಲ್, ಗೋಯಲ್ ಎಂಬುವವರು ಗಾಯಗೊಂಡಿದ್ದು, ಮೂವರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಕುಂದಲಹಳ್ಳಿಯ ಸೆವೆನ್ ಹಿಲ್ಸ್ ಶ್ರೀಸಾಯಿ ಪಿ.ಜಿ.ಯ ಎರಡನೇ ಮಹಡಿಯಲ್ಲಿ ಸಂಜೆ 6.30ರ ಸುಮಾರಿಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಪಿಜಿಯಲ್ಲಿ ಸುಮಾರು 52 ಮಂದಿ ವಾಸವಿದ್ದರು ಎಂದು ತಿಳಿದುಬಂದಿದೆ.
ಅಕ್ರಮವಾಗಿ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಕೋರ್ಟ್ ಹೊಸ ವರ್ಷದ ಹೊತ್ತಲ್ಲಿ ಬಿಗ್ ರಿಲೀಫ್ ನೀಡಿದೆ. ಜಾಮೀನು ಕೋರಿ ವೀರೇಂದ್ರ ಪಪ್ಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣ ವಿಚಾರವಾಗಿ ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ ಸೇರಿದಂತೆ ಪಪ್ಪಿಗೆ ಸಂಬಂಧಿಸಿದ ಎಲ್ಲ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿದ್ದರು. ರೇಡ್ ನಡೆದಿತ್ತು. ಸತತ 18 ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದ್ದ ಅಧಿಕಾರಿಗಳು, ಕೆ.ಸಿ.ವೀರೇಂದ್ರ ಪಪ್ಪಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು, ವಿದೇಶಿ ಕರೆನ್ಸಿ ಸೇರಿದಂತೆ ಚಿನ್ನಾಭರಣ ಮತ್ತು ವಾಹನಗಳನ್ನು ಜಪ್ತಿ ಮಾಡಿದ್ದರು.