ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ -19 ಉಪಕರಣಗಳು ಮತ್ತು ಔಷಧಿ ಖರೀದಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ತನಿಖಾ ಆಯೋಗವು ಬುಧವಾರ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ನ್ಯಾ. ಮೈಕೆಲ್ ಡಿ ಕುನ್ಹಾ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅಂತಿಮ ವರದಿ ಸಲ್ಲಿಸಿದರು.
ಕೋವಿಡ್ 19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ಸಿದ್ದರಾಮಯ್ಯ ಸರ್ಕಾರ 2023ರ ಆಗಸ್ಟ್‌ನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿತ್ತು.
ಈ ಆಯೋಗವು 2025ರ ಏಪ್ರಿಲ್‌ನಲ್ಲಿ 1,808 ಪುಟಗಳ ಎರಡನೇ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು.
ಎರಡು ಮಧ್ಯಂತರ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು 2024ರ ನವೆಂಬರ್‌ನಲ್ಲಿ ಸಚಿವ ಸಂಪುಟವು ತೀರ್ಮಾನಿಸಿತ್ತು. ಆದರೆ, ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರ, ಚೀನಾ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿ ಮಾಡಿದ್ದು, ಕಿಟ್ ಖರೀದಿ ವೇಳೆ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ದರ ವ್ಯತ್ಯಾಸದಿಂದ ಪಿಪಿಇ ಕಿಟ್ ಪೂರೈಕೆದಾರರಿಗೆ 14.21 ಕೋಟಿ ರೂ. ಲಾಭವಾಗಿದೆ. ಪೂರೈಕೆದಾರರಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಅಕ್ರಮ ಎಸಗಲಾಗಿದೆ. ಒಟ್ಟು 769 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಹೇಳಲಾಗಿತ್ತು.
ಪಿಪಿಇ ಕಿಟ್ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದ ನ್ಯಾ. ಕುನ್ಹಾ ಆಯೋಗ, ಈ ಸಂಬಂಧ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸು ಕೂಡ ಮಾಡಿತ್ತು.