ಬೆಂಗಳೂರು: ಕೇಂದ್ರ ಸರ್ಕಾರ ನಮ್ಮ ಮೆಟ್ರೋ ದರವನ್ನು ಏಕಾಏಕಿ ಶೇ. 50ರಷ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಸೋಮವಾರ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ, ದರ ಇಳಿಸುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಹರೀಶ್ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಮತ್ತಿತರರಿಂದ ನಿಯೋಗ, ಬಿಎಂಆರ್ಸಿಎಲ್ ಎಂಡಿಗೆ ಮನವಿ ಪತ್ರ ಸಲ್ಲಿಸಿದೆ.
ಮನವಿಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ನಿಯೋಗದಿಂದ ಮೆಟ್ರೋ ಟಿಕೆಟ್ ದರ ಏರಿಕೆ ನಿರ್ಧಾರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಮೆಟ್ರೋ ಎಂಡಿ ಜೊತೆ ಮಾತಾಡಿ ಪ್ರಯಾಣಿಕರ ಮೇಲೆ ಹೊರೆ ಆಗುವ ಬಗ್ಗೆ ವಿವರಿಸಿದ್ದೇವೆ. ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಟಿಕೆಟ್ ದರ ಕಡಿಮೆ ಇದೆ ಅಂತ ಗಮನಕ್ಕೆ ತಂದಿದ್ದೇವೆ ಎಂದರು.
ಯಾವುದೋ ಕಮಿಟಿ ವರದಿ ಪಡೆದು ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಜನಕ್ಕೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಅಂತ ಹೇಳಿದ್ದೇವೆ ಎಂದರು.