ಬೆಂಗಳೂರು: ಬಾಗಲಕೋಟೆಯಲ್ಲಿ ಅತ್ಯಾಧುನಿಕ ಪಾಲಿಲ್ಯಾಕ್ಟಿಕ್ ಆಸಿಡ್ ಉತ್ಪಾದನಾ ಘಟಕ ಸ್ಥಾಪಿಸಲು ಕರ್ನಾಟಕ ಸರ್ಕಾರದೊಂದಿಗೆ ನಿರಾಣಿ ಶುಗರ್ಸ್ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ ಎಂದು ಕಂಪನಿ ಬುಧವಾರ ತಿಳಿಸಿದೆ.
ಅಂದಾಜು 2,000 ಕೋಟಿ ರೂ.ಗಳ ಪ್ರಸ್ತಾವಿತ ಹೂಡಿಕೆಯೊಂದಿಗೆ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದ್ದು, ಇದು ಈ ಪ್ರದೇಶದಲ್ಲಿ 600800 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಅದು ಹೇಳಿದೆ.
ನಿಗದಿತ ಅವಧಿಯಲ್ಲಿ ಘಟಕ ಸ್ಥಾಪನೆಗೆ ಅಗತ್ಯವಿರುವ ಅನುಮೋದನೆ, ಅನುಮತಿ ಮತ್ತು ಪ್ರೋತ್ಸಾಹಗಳನ್ನು ರಾಜ್ಯ ಸರ್ಕಾರ ಸುಗಮಗೊಳಿಸುವುದನ್ನು ಖಾತ್ರಿಪಡಿಸಿದೆ ಎಂದು ಕಂಪನಿ ಹೇಳಿದೆ. ಈ ಹೂಡಿಕೆಯೊಂದಿಗೆ ಕರ್ನಾಟಕವು ಈ ವಲಯದಲ್ಲಿ ತೊಡಗಿಸಿಕೊಳ್ಳುತ್ತಿರುವ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಲಿದೆ.
ನಾವೀನ್ಯತೆ, ಕೃಷಿ ಸಂಪನ್ಮೂಲಗಳು ಮತ್ತು ಸುಸ್ಥಿರತೆಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ, ಕರ್ನಾಟಕವು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಸಂಪನ್ಮೂಲಗಳ ಕೊರತೆಯಂತಹ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ನಡೆದ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಈ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಯೋಜನೆಯು ಕೇವಲ ಉತ್ಪಾದನೆಯಲ್ಲಿ ಹೂಡಿಕೆಯಾಗದೆ, ಹಸಿರು ಮತ್ತು ಭವಿಷ್ಯದಲ್ಲಿ ಕರ್ನಾಟಕ ಹೆಚ್ಚು ಸ್ವಾವಲಂಬಿಯಾಗಲು ಬದ್ಧವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಬಿಕ್ಕಟ್ಟಿಗೆ ನಿಜವಾದ ಪರಿಣಾಮಕಾರಿ ಮತ್ತು ಸಮರ್ಥನೀಯ ಪರಿಹಾರ ಸಿಗಲಿದೆ. ಬಲವಾದ ಕೈಗಾರಿಕಾ ಪರಿಸರ ವ್ಯವಸ್ಥೆ ಮತ್ತು ಪ್ರಗತಿಪರ ನೀತಿಗಳೊಂದಿಗೆ ರಾಜ್ಯ ಇದನ್ನು ಮುನ್ನಡೆಸಲು ಸೂಕ್ತ ತಾಣವಾಗಿದೆ ಎಂದು ನಿರಾಣಿ ಶುಗರ್ಸ್‌ನ ನಿರ್ದೇಶಕ ವಿಶಾಲ್ ನಿರಾಣಿ ಹೇಳಿದ್ದಾರೆ.