ಡಿ.ಕೆ ಶಿವಕುಮಾರ್ 
ರಾಜ್ಯ

ಕರ್ನಾಟಕವನ್ನು ಕೈಗಾರಿಕಾ ಪ್ರಗತಿ ಜತೆಗೆ ಸುಸ್ಥಿರ ರಾಜ್ಯ ಮಾಡುವ ಗುರಿ; ನೂತನ ನೀತಿ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿ: ಡಿ.ಕೆ ಶಿವಕುಮಾರ್

ತಂತ್ರಜ್ಞಾನ ಆಧಾರಿತ ಸಂಸ್ಥೆಗಳನ್ನು ರೂಪಿಸುವುದು ನಮ್ಮ ಕಾರ್ಯತಂತ್ರವಾಗಿದೆ. ನಿನ್ನೆ ಪ್ರಕಟಿಸಲಾದ ಕರ್ನಾಟಕ ಕೈಗಾರಿಕಾ ನೀತಿ 2025-30 ಎಲ್ಲರನ್ನು ಒಳಗೊಂಡು ಪ್ರಗತಿ ಸಾಧಿಸುವ ದೂರದೃಷ್ಟಿ ಹೊಂದಿದೆ. ಇದರಿಂದ ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ.

ಬೆಂಗಳೂರು: ಕರ್ನಾಟಕವನ್ನು ಕೈಗಾರಿಕೆ ಪ್ರಗತಿ ಜತೆಗೆ ಸುಸ್ಥಿರ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ವೆಸ್ಟ್ ಕರ್ನಾಟಕ 2025 ಕೇವಲ ಹೂಡಿಕೆ ಸಮಾವೇಶ ಮಾತ್ರವಲ್ಲ. ಇದು ಭವಿಷ್ಯವನ್ನು ರೂಪಿಸುವ ನಮ್ಮ ಸಹಯೋಗದ ಹಾಗೂ ಕೈಗಾರಿಕಾ ಪ್ರಗತಿ ಸಾಧಿಸುವ ವೇದಿಕೆ. ಇದು ಎಲ್ಲರನ್ನು ಒಳಗೊಂಡು ಪ್ರಗತಿಯನ್ನು ಖಾತರಿಪಡಿಸುವ ಕಾರ್ಯಕ್ರಮ ಎಂದರು.

ಇದು ತಕ್ಷಣದ ಲಾಭಕ್ಕಿಂತ ಹೆಚ್ಚಾಗಿ ದೀರ್ಘಾವಧಿಯ ಯೋಜನೆಗೆ ತಳಹದಿಯಾಗಿದೆ. ಇಂದು ಇಲ್ಲಿರುವ ಪ್ರತಿಯೊಂದು ನೀತಿ, ಸುಧಾರಣೆ ಕಾರ್ಯರೂಪಕ್ಕೆ ಬರಲಿದೆ. ನಾವು ಸುಲಭ ವ್ಯಾಪಾರ ವಾತಾವರಣ ಸೃಷ್ಟಿಸುವ ಬಗ್ಗೆ ಕೇವಲ ಮಾತನಾಡುವುದಿಲ್ಲ. ಅದನ್ನು ಮಾಡಿ ತೋರಿಸುತ್ತೇವೆ. ಏಕಗವಾಕ್ಷಿ ಮೂಲಕ ಅನುಮತಿ ಪ್ರಕ್ರಿಯೆ ಡಿಜಿಟಲೀಕರಣಗೊಳಿಸಲಾಗಿದ್ದು, ಕಾಲಮಿತಿಯಲ್ಲಿ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ" ಎಂದು ಭರವಸೆ ನೀಡಿದರು.

ಭೂ ಸ್ವಾಧೀನ ಪ್ರಕ್ರಿಯೆ, ಮೂಲ ಸೌಕರ್ಯ ಒದಗಿಸಲು ವ್ಯವಸ್ಥೆ ರೂಪಿಸಲಾಗಿದೆ. ನಾವು ಕೊಟ್ಟ ಮಾತಿಗೆ ಬದ್ಧರಾಗಿರುತ್ತೇವೆ ಎಂದು ರಾಜ್ಯ ಸರ್ಕಾರದ ಪರವಾಗಿ ಭರವಸೆ ನೀಡುತ್ತೇನೆ. ನಮ್ಮ ಸರ್ಕಾರ ಪ್ರಗತಿಪರ ಆಲೋಚನೆಗೆ ಬದ್ಧವಾಗಿದ್ದು, ಅತ್ಯುತ್ತಮ ಮೌಲ್ಯದ ಉದ್ಯೋಗ ಸೃಷ್ಟಿ, ಸರಬರಾಜು ಸರಪಳಿ ಸುಭದ್ರಗೊಳಿಸಿ, ತಂತ್ರಜ್ಞಾನ ಆಧಾರಿತ ಸಂಸ್ಥೆಗಳನ್ನು ರೂಪಿಸುವುದು ನಮ್ಮ ಕಾರ್ಯತಂತ್ರವಾಗಿದೆ. ನಿನ್ನೆ ಪ್ರಕಟಿಸಲಾದ ಕರ್ನಾಟಕ ಕೈಗಾರಿಕಾ ನೀತಿ 2025-30 ಎಲ್ಲರನ್ನು ಒಳಗೊಂಡು ಪ್ರಗತಿ ಸಾಧಿಸುವ ದೂರದೃಷ್ಟಿ ಹೊಂದಿದೆ. ಇದರಿಂದ ರಾಜ್ಯದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಇದೆ" ಎಂದರು.

"ನಾವು ಈಗಾಗಲೇ ಬಂಡವಾಳ ಹೂಡಿಕೆಯಲ್ಲಿ ಸಬ್ಸಿಡಿ ಸೇರಿದಂತೆ ಅನೇಕ ಆಕರ್ಷಕ ಅವಕಾಶಗಳನ್ನು ನೀಡಿದ್ದು, ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿರುದ್ಯೋಗ ಸಮಸ್ಯೆ, ಪರಿಸರ ಮಾಲಿನ್ಯ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶವಿದೆ" ಎಂದು ತಿಳಿಸಿದರು.

ನೀವೆಲ್ಲರೂ ಬೆಂಗಳೂರಿನ ಹೊರತಾಗಿ ರಾಜ್ಯದ ಇತರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸಲು ಮುಂದಾಗಬೇಕು. ನಾನು 20 ವರ್ಷಗಳ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1.10 ಕೋಟಿ ವಾಹನಗಳ ಸಂಖ್ಯೆ ಇದೆ. ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಬಗೆಹರಿಸಲು 1 ಲಕ್ಷ ಕೋಟಿಯಷ್ಟು ಹಣ ವೆಚ್ಚಮಾಡಲು ಮುಂದಾಗಿದ್ದೇವೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ಯಶಸ್ಸು ಸಾಧಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ರಾಜ್ಯದಲ್ಲಿ ನಿರ್ಮಿಸಲಾಗಿರುವ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಅತ್ಯುತ್ತಮ ಸಹಕಾರ ನೀಡಿದ್ದರು. ನಾನು ರೂಪಿಸಿದ ಪರಿಕಲ್ಪನೆಯಲ್ಲಿ ರೈತರಿಂದ ಒಂದೇ ಒಂದು ಎಕರೆ ಜಮೀನನ್ನು ಖರೀದಿ ಮಾಡದೇ 15 ಸಾವಿರ ಎಕರೆಯಲ್ಲಿ ಈ ಸೋಲಾರ್ ಪಾರ್ಕ್ ನಿರ್ಮಿಸಲಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ವಿದ್ಯುತ್ ಉತ್ಪಾದಕರು ಹಾಗೂ ರೈತರ ಸಹಯೋಗದಲ್ಲಿ ರೂಪಿಸಲಾಗಿದೆ. ಆಗಿನ ಕಾಲದಲ್ಲಿ ರೈತರ ಭೂಮಿಯ ಬೆಲೆ ಕೇವಲ 15 ಸಾವಿರ ಇತ್ತು ಆದರೆ ಈ ಯೋಜನೆಯಿಂದ ರೈತರು ಪ್ರತಿ ವರ್ಷ ಬಾಡಿಗೆ ರೂಪದಲ್ಲಿ 25 ಸಾವಿರ ಹಣವನ್ನು ಪಡೆಯುತ್ತಿದ್ದಾರೆ. 28 ವರ್ಷಗಳ ಕಾಲ ಈ ಹಣ ಪಡೆಯಲಿದ್ದಾರೆ. ನಮ್ಮ ಯೋಜನೆ ಯಶಸ್ಸಿನ ನಂತರ ಕೇಂದ್ರ ಸರ್ಕಾರ ಕರ್ನಾಟಕ ಮಾಡೆಲ್ ಅನುಸರಿಸುವಂತೆ ಇಡೀ ದೇಶಕ್ಕೆ ಕರೆ ನೀಡಿತು. ಈ ಯೋಜನೆಯಿಂದ ವಿದ್ಯುತ್ ಟ್ರಾನ್ಸ್ ಮಿಷನ್ ನಲ್ಲಿ ಆಗುತ್ತಿದ್ದ ನಷ್ಟ ತಪ್ಪಿಸಲಾಗಿದೆ.

ಕೇಂದ್ರ ಸಚಿವರು ಇಂದು ನಮ್ಮ ರಾಜ್ಯಕ್ಕೆ ಈ ಹಿಂದೆ ನೀಡುತ್ತಿದ್ದಂತೆ ಹೆಚ್ಚಿನ ಸಹಕಾರ ನೀಡುವ ಭರವಸೆ ಕೊಟ್ಟು ಹೋಗಬೇಕು. ಸಚಿವರು ಬೆಂಗಳೂರಿನಲ್ಲಿ ಭಾರತ ಮಂಟಪ ಎಂಬ ಅತ್ಯುತ್ತಮ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪಿಸೋಣ ಅದಕ್ಕಾಗಿ ಒಳ್ಳೆಯ ಜಾಗ ನೋಡಿ ಎಂದು ನನ್ನ ಕಿವಿಯಲ್ಲಿ ಹೇಳುತ್ತಿದ್ದರು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ" ಎಂದು ತಿಳಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT