ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ -2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿದೆ.
ಕೊನೆಯ ದಿನವಾದ ಇಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಇನ್ವೆಸ್ಟ್ ಕರ್ನಾಟಕ 2025 ರಲ್ಲಿ ಕ್ಲೀನ್ ಮೊಬಿಲಿಟಿ ನೀತಿ 2025-2030 ಅನ್ನು ಅನಾವರಣಗೊಳಿಸಿದರು.
ಈ ನೀತಿಯು ಕರ್ನಾಟಕವನ್ನು ಏಷ್ಯಾದ ಅಗ್ರ ಕ್ಲೀನ್ ಮೊಬಿಲಿಟಿ ಕೇಂದ್ರವಾಗಿಸುವ ಗುರಿಯನ್ನು ಹೊಂದಿದೆ.
ರಾಜ್ಯ ಸರ್ಕಾರವು ವಿದ್ಯುತ್ ವಾಹನ(ಇವಿ) ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಈ ಹೊಸ ಕ್ಲೀನ್ ಮೊಬಿಲಿಟಿ ನೀತಿಯು 2030ರ ವೇಳೆಗೆ ೧ ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು 50,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಿದೆ.
ಕ್ಲೀನ್ ಮೊಬಿಲಿಟಿ ನೀತಿ ಕರ್ನಾಟಕದಾದ್ಯಂತ ಒಟ್ಟು ಹೂಡಿಕೆ ಮಾಡಿದ ಬಂಡವಾಳದ ಮೇಲೆ ಶೇಕಡಾ 25 ರವರೆಗೆ ಸಬ್ಸಿಡಿಗಳನ್ನು ನೀಡುತ್ತದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳು ಶೇ. 20 ರಷ್ಟು ಕ್ಯಾಪೆಕ್ಸ್ ಸಬ್ಸಿಡಿಗೆ ಅರ್ಹವಾಗಿವೆ.
ಪ್ರಸ್ತುತ, ರಾಜ್ಯವು 5,403 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಹೆಚ್ಚುವರಿಯಾಗಿ 2,600 ಸ್ಟೇಷನ್ ಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಗೌರಿಬಿದನೂರು, ಧಾರವಾಡ ಮತ್ತು ಹಾರೋಹಳ್ಳಿಯಲ್ಲಿ ಮೂರು ವಿಶ್ವ ದರ್ಜೆಯ ಮೊಬಿಲಿಟಿ ಹಬ್‌ಗಳನ್ನು ಸ್ಥಾಪಿಸುವ ಮೂಲಕ ಕ್ಲೀನ್ ಮೊಬಿಲಿಟಿ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವತ್ತ ಈ ನೀತಿ ಗಮನಹರಿಸುತ್ತದೆ.
ಗೌರಿಬಿದನೂರಿನಲ್ಲಿ 825 ಎಕರೆ, ಧಾರವಾಡದ ಚಿಕ್ಕಮಲ್ಲಿಗವಾಡದಲ್ಲಿ 1000 ಎಕರೆ, ರಾಮನಗರದ ಹಾರೋಹಳ್ಳಿಯಲ್ಲಿ 700 ಎಕರೆಯನ್ನು ಕ್ಲೀನ್ ಮೊಬಿಲಿಟಿ ಕ್ಲಸ್ಟರ್ ಎಂದು ಗುರುತಿಸಿದ್ದು, ಗ್ರೀನ್ ಎನರ್ಜಿ, ವಿದ್ಯುಚ್ಚಾಲಿತ ವಾಹನಗಳಿಗೆ ಪ್ರೋತ್ಸಾಹಧನ ನೀಡುವುದನ್ನು ಪ್ರಸ್ತಾವಿಸಲಾಗಿದೆ.
ಹೆಚ್ಚುವರಿಯಾಗಿ, ರಾಜ್ಯಾದ್ಯಂತ ವಿಶ್ವಾಸಾರ್ಹ ಕ್ಲೀನ್ ಇಂಧನ ಜಾಲವನ್ನು ಖಚಿತಪಡಿಸಿಕೊಳ್ಳಲು ಫಾಸ್ಟ್-ಚಾರ್ಜಿಂಗ್ ಸ್ಟೇಷನ್‌ಗಳು, ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್‌ಗಳು ಮತ್ತು ಹೈಡ್ರೋಜನ್ ಇಂಧನ ಕೇಂದ್ರಗಳನ್ನು ಸ್ಥಾಪಿಸಲು ಸಬ್ಸಿಡಿ ನೀಡಲಾಗುತ್ತದೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹಾಗೂ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.