ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಕೈಗೆತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ತಕ್ಕ ಶಿಕ್ಷೆಯಾಗುವಂತೆ ಕ್ರಮ ವಹಿಸಿ ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಚರ್ಚಿಸಿದ ಅವರು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಅದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು, ಇದರ ಜೊತೆಗೆ ತಪ್ಪು ಮಾಡದವರಿಗೆ ಕೂಡ ತೊಂದರೆ ಆಗಬಾರದು. ಮುಂದೆ ಇಂಥಾ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಘಟನೆಯಲ್ಲಿ ಯಾರಿದ್ದಾರೆ ಅದೆಲ್ಲ ಹೇಳೋಕೆ ಆಗಲ್ಲ. ಆದರೆ ಅದರ ಹಿಂದೆ ಎಷ್ಟೇ ಪ್ರಭಾವಿ ಇದ್ದರೂ ಅವರ ವಿರುದ್ಧ ನಿರ್ದಯ ಕ್ರಮ ಕೈಗೊಳ್ಳಲಾಗುವುದು ಮತ್ತು ಹೆಚ್ಚಿನ ಬಂಧನಗಳನ್ನು ಮಾಡಲಾಗುತ್ತದೆ ಎಂದು ಹೇಳಿದ್ದರು. ಈ ಘಟನೆ ಯಾವ ಕಾರಣಕ್ಕಾಗಿ ಆಯಿತು. ಯಾರಿಂದ ಆಯ್ತು ಅಂತ ತನಿಖೆ ಮಾಡಲು ಹೇಳಿದ್ದೆ. ಪ್ರಾಥಮಿಕ ಮಾಹಿತಿ ಪಡೆಯಲು ಇಲ್ಲಿಗೆ ಬಂದಿದ್ದೇನೆ. ಅಧಿಕಾರಿಗಳು ನನಗೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ತನಿಖೆಗೆ ಈಗಾಗಲೇ ಆದೇಶ ಮಾಡಿರುವುದರಿಂದ ಏನೆಲ್ಲಾ ಚರ್ಚೆ ಆಗಿದೆ. ಘಟನೆಯಲ್ಲಿ ಯಾರಿದ್ದಾರೆ ಅದೆಲ್ಲವನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದರು. ಅಲ್ಲದೆ ರಾಜ್ಯದಲ್ಲಿ ಉತ್ತರಪ್ರದೇಶದಂತ ಪರಿಸ್ಥಿತಿ ನಿರ್ಮಾಣವಾಗಿಲ್ಲ. ನಮ್ಮ ಜನರು ಆ ಮಟ್ಟಕ್ಕೆ ಹೋಗಿಲ್ಲ. ಹೀಗಾಗಿ ಗಲಭೆಕೋರರ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುವುದಿಲ್ಲ ಎಂದರು.
ಇದುವರೆಗೆ 16 ಜನರ ಬಂಧನ, 1,000 ಕೇಸ್
ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಶುಕ್ರವಾರ ಬಂಧನಗಳ ಸಂಖ್ಯೆ 16ಕ್ಕೆ ಏರಿದ್ದು, ಈ ಸಂಬಂಧ 1,000 ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳ ಗುರುತು ಮತ್ತು ಸ್ಥಳಗಳನ್ನು ಪತ್ತೆಹಚ್ಚಲಾಗುತ್ತಿರುವುದರಿಂದ ಇನ್ನೂ ಅನೇಕರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ತಮ್ಮ ಮನೆಗಳಲ್ಲಿಯೇ ಬಿಟ್ಟು ಹೋಗಿದ್ದಾರೆ. ಆದರೆ ಸದ್ಯ ಬಂಧನವಾಗಿರುವ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.