ಬೆಂಗಳೂರು: ಕಳೆದೊಂದು ದಶಕದಲ್ಲಿ ಪ್ರಮುಖವಾಗಿ ಯುವಕರಲ್ಲಿ ಬಂಜೆತನ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಶೇ. 40-50 ರಷ್ಟು ಬಂಜೆತನ ಪ್ರಕರಣಗಳು ಪುರುಷರ ಅಂಶಗಳೊಂದಿಗೆ ಸಂಬಂಧ ಹೊಂದಿವೆ ಎಂದು ಸಮಗ್ರ ಬಂಜೆತನದ ಕಾನ್ಕ್ಲೇವ್ (CIC) 2025 ರ ಸಂಘಟನಾ ಅಧ್ಯಕ್ಷ ಡಾ.ಪ್ರವೀಣ್ ಜೋಶಿ ಹೇಳಿದರು.
ಭಾನುವಾರ ಗ್ಲೋಬಲ್ ಹೆಲ್ತ್‌ಕೇರ್ ಅಕಾಡೆಮಿ ನಗರದಲ್ಲಿ ಆಯೋಜಿಸಿದ್ದ CIC 2025 ರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ದಂಪತಿಗಳಲ್ಲಿ ಬಂಜೆತನವು ಆತಂಕಕಾರಿಯಾಗಿ ಹೆಚ್ಚಾಗುತ್ತಿರುವುದರಿಂದ ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಫಲವತ್ತತೆಯ ಆರೈಕೆಯ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಿದ್ದಾರೆ. ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಫಲವತ್ತತೆಯ ಆರೈಕೆಗೆ ಗಮನ ನೀಡಬೇಕು ಎಂದರು.
ಬಂಜೆತನ ಹೆಚ್ಚಳಕ್ಕೆ ಕಾರಣಗಳು: ನಗರ ಪ್ರದೇಶಗಳಲ್ಲಿ ಬಂಜೆತನದ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಡಾ. ಜೋಶಿ, ಕಡಿಮೆ ವೀರ್ಯಾಣು ಹಾಗೂ ವೀರ್ಯಗಳ ಕಡಿಮೆ ಚಲನಶೀಲನತೆ, ಹಾರ್ಮೋನುಗಳ ಅಸಮತೋಲನ, ಆನುವಂಶಿಕತೆ, ಧೂಮಪಾನ, ಅತಿಯಾದ ಮದ್ಯಪಾನ, ಸ್ಥೂಲಕಾಯತೆ ಮತ್ತು ಶಾಖ,ವಿಕಿರಣಕ್ಕೆ ಹೆಚ್ಚಿನ ಕಾಲ ಒಡ್ಡಿಕೊಳ್ಳುವುದು ಮುಂತಾದ ಜೀವನಶೈಲಿ ಪುರುಷ ಬಂಜೆತನದ ಹೆಚ್ಚಳಕ್ಕೆ ಕಾರಣವಾಗಿವೆ.
ಅಲ್ಲದೇ, ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟ ವೀರ್ಯದ ಆರೋಗ್ಯ ಕ್ಷೀಣಿಸುವುದಕ್ಕೆ ಸಂಬಂಧಿಸಿದೆ ಎಂದು ಡಾ. ಪ್ರವೀಣ್ ಹೇಳಿದರು.
ಕರ್ನಾಟಕದಲ್ಲಿ ಶೇ. 5.9 ರಷ್ಟು ವಿವಾಹಿತ ಮಹಿಳೆಯರಲ್ಲಿ ಬಂಜೆತನ: ಸ್ತ್ರೀ ಬಂಜೆತನವನ್ನು ಉದ್ದೇಶಿಸಿ ಮಾತನಾಡಿದ CIC 2025 ರ ಸಂಘಟನಾ ಕಾರ್ಯದರ್ಶಿ ಡಾ.ಮೇಘನಾ ನ್ಯಾಪತಿ, “2019-20ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (NFHS-5) ಪ್ರಕಾರ 15-49 ವರ್ಷ ವಯಸ್ಸಿನ ಪ್ರತಿ 1,000 ವಿವಾಹಿತ ಮಹಿಳೆಯರಲ್ಲಿ ಶೇ. 18.7 ರಷ್ಟು ಮಹಿಳೆಯರ ಮೇಲೆ ಬಂಜೆತನ ಪರಿಣಾಮ ಬೀರುತ್ತದೆ. ಗೋವಾ, ಲಕ್ಷದ್ವೀಪ ಮತ್ತು ಛತ್ತೀಸ್‌ಗಢದಂತಹ ಕೆಲವು ಪ್ರದೇಶಗಳು ಇನ್ನೂ ಹೆಚ್ಚಿನ ದರಗಳನ್ನು ಹೊಂದಿವೆ. ಕರ್ನಾಟಕದಲ್ಲಿ ಸುಮಾರು ಶೇ. 5.9 ರಷ್ಟು ವಿವಾಹಿತ ಮಹಿಳೆಯರು ಬಂಜೆತನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ನಗರ ಪ್ರದೇಶಗಳಿಗಿಂತ (ಶೇ.5.5) ತುಸು ಹೆಚ್ಚು (ಶೇ. 6.1 ರಷ್ಟು) ಮಹಿಳೆಯರು ಬಂಜೆತನ ಅನುಭವಿಸುತ್ತಿದ್ದಾರೆ ಎಂದು ಜಿಲ್ಲಾ ಮಟ್ಟದ ಗೃಹಿಣಿಯರ ಸರ್ವೆ (DLHS) ತೋರಿಸಿದೆ. ಈ ವ್ಯತ್ಯಾಸಗಳು ವಿವಿಧ ಪ್ರದೇಶಗಳಲ್ಲಿನ ಮಹಿಳೆಯರಿಗೆ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುವ ತುರ್ತು ಅಗತ್ಯವನ್ನು ತೋರಿಸಿವೆ ಎಂದು ಅವರು ಹೇಳಿದರು.
ಸಾಮಾಜಿಕ ಕಟ್ಟುಪಾಡು ತೊಡೆದುಹಾಕಬೇಕು: ಸಂತಾನೋತ್ಪತ್ತಿ ವೈದ್ಯಶಾಸ್ತ್ರದಲ್ಲಿ ಅನೇಕ ಸಂಶೋಧನೆಗಳ ಹೊರತಾಗಿಯೂ, ಬಂಜೆತನವು ವಿಶೇಷವಾಗಿ ಪುರುಷರಲ್ಲಿ ಕಳಂಕಿತ ಮತ್ತು ಕಡಿಮೆ ರೋಗನಿರ್ಣಯದ ಸಮಸ್ಯೆಯಾಗಿ ಉಳಿದಿದೆ. ಬಂಜೆತನ ಕುರಿತ ಸಾಮಾಜಿಕ ಕಟ್ಟುಪಾಡುಗಳನ್ನು ತೊಡೆದುಹಾಕಬೇಕಾದ ಅಗತ್ಯವಿದೆ ಎಂದು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ ಬಿ ಎಸ್ ಅಜೈಕುಮಾರ್ ಹೇಳಿದರು.