ಬೆಂಗಳೂರು: ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸುವುದರಿಂದ ಕ್ಯಾನ್ಸರ್ಕಾರಕ ಅಂಶ ಬಿಡುಗಡೆಯಾಗುತ್ತದೆ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿರುವುದರಿಂದ ಹೊಟೇಲ್, ಉಪಾಹಾರ ಮತ್ತು ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಈಗಾಗಲೇ ಆದೇಶ ಹೊರಡಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಇಡ್ಲಿ ತಯಾರಿ ವಿಧಾನದ ಬಗ್ಗೆ ತಪಾಸಣೆ ನಡೆಸಿದ್ದಾರೆ. ಸರ್ಕಾರದ ಆದೇಶ ಹೊರಬಂದ ನಂತರವೂ ಇಡ್ಲಿ ತಯಾರಿಸುವುದಕ್ಕೆ ಪ್ಲಾಸ್ಟಿಕ್ ಹಾಳೆ ಬಳಸುವುದು ಕಂಡುಬಂದರೆ ಅಂತಹ ಹೊಟೇಲ್, ತಿನಿಸು ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಹಸಿರು ಬಟಾಣಿಯಲ್ಲೂ ವಿಷಕಾರಿ ಅಂಶ ಪತ್ತೆ
ಇಡ್ಲಿ ಬಳಿಕ ಹಸಿರು ಬಟಾಣಿ ಕೂಡ ಅಸುರಕ್ಷಿತ ಎಂಬುದು ಆಹಾರ ಇಲಾಖೆಯ ಪ್ರಯೋಗದಿಂದ ದೃಢಪಟ್ಟಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿನ ಸುಮಾರು 36 ಮಾದರಿಯ ಹಸಿರು ಬಟಾಣಿ ಮಾದರಿಗಳನ್ನು ಪಡೆದಿದ್ದ ಆಹಾರ ಇಲಾಖೆ ಅವುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು. ಇದೀಗ ಪ್ರಯೋಗಾಲಯ ವರದಿ ಬಂದಿದ್ದು, 28 ಕ್ಕೂ ಹೆಚ್ಚು ಹಸಿರು ಬಟಾಣಿ ಮಾದರಿಗಳು ಅಸುರಕ್ಷಿತ ಎಂಬ ವಿಚಾರ ತಿಳಿದುಬಂದಿದೆ.
ಬಟಾಣಿ ಆರೋಗ್ಯಕ್ಕೆ ಮಾರಕ?
ಬಟಾಣಿ ಹಸಿರಾಗಿ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದೆ. ಕಲರ್ ಬಳಕೆಯಿಂದ ಬಟಾಣಿ ಸಾಮಾನ್ಯಕ್ಕಿಂತ ಹೆಚ್ಚು ಹಸಿರಾಗಿ ಕಾಣುತ್ತಿದ್ದು, ಜನರನ್ನು ಆಕರ್ಷಿಸುತ್ತಿದೆ. ಬಟಾಣಿಯಲ್ಲಿ ಬಣ್ಣ ಬಳಕೆ ಮಾಡುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಬಟಾಣಿಯ ಬಣ್ಣ ಕಿಡ್ನಿಯ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಕೃತಕ ಬಣ್ಣ ಬಳಸಿ ಬಟಾಣಿ ಮಾರಟ ಮಾಡುವ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಹಿಂದೆ ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ನಂತಹ ಜನಪ್ರಿಯ ಕೇಕ್ ಸೇರಿದಂತೆ 12 ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್-ಉಂಟುಮಾಡುವ ಅಂಶಗಳು ಪತ್ತೆಯಾಗಿದ್ದವು. ಗೋಬಿ ಮಂಚೂರಿಯನ್, ಕಬಾಬ್‌ಗಳು ಮತ್ತು ಪಾನಿ ಪುರಿ ಸಾಸ್‌ಗಳಂತಹ ಖಾದ್ಯಗಳಲ್ಲಿ ಕೃತಕ ಬಣ್ಣಗಳನ್ನು ಆಹಾರ ಸುರಕ್ಷತಾ ಇಲಾಖೆ ನಿಷೇಧಿಸಿದ ನಂತರ ಈ ಕ್ರಮಗಳು ಬಂದಿವೆ.