ನೆಲಮಂಗಲ: ತನ್ನ ಸಾಕುನಾಯಿಯ ಹಠಾತ್ ಸಾವಿನಿಂದ ಮನನೊಂದ ನಾಯಿಯ ಮಾಲೀಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿ ನಡೆದಿದೆ.
ಹೆಗ್ಗಡದೇವನಪುರ ಗ್ರಾಮದ ನಿವಾಸಿ ರಾಜಶೇಖರ್ (33ವ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂಬತ್ತು ವರ್ಷಗಳ ಹಿಂದೆ, ರಾಜಶೇಖರ್ ಅವರು ಜರ್ಮನ್ ಶೆಫರ್ಡ್ ನಾಯಿಯನ್ನು ಖರೀದಿಸಿದ್ದರು. ಅದಕ್ಕೆ "ಬೌನ್ಸಿ" ಎಂದು ಹೆಸರಿಟ್ಟಿದ್ದರು. ಅದನ್ನು ಪ್ರೀತಿಯಿಂದ ಪೋಷಿಸುತ್ತಾ ಕುಟುಂಬದ ಸದಸ್ಯರಂತೆ ಪರಿಗಣಿಸಿದ್ದರು. ದುರದೃಷ್ಟವಶಾತ್, ಬೌನ್ಸಿ ಅನಾರೋಗ್ಯದ ಕಾರಣ ಕಳೆದ ಮಂಗಳವಾರ ನಿಧನವಾಯಿತು.
ರಾಜಶೇಖರ್ ತಮ್ಮ ಜಮೀನಿನಲ್ಲಿ ನಾಯಿಯ ಅಂತ್ಯಕ್ರಿಯೆ ನಡೆಸಿ ಮನೆಗೆ ಮರಳಿದ್ದರು. ಮನೆಗೆ ಬಂದ ಮೇಲೆ ತೀವ್ರ ಖಿನ್ನತೆಯಿಂದ ಇದ್ದರು. ಮರುದಿನ ನಾಯಿಯ ಕುತ್ತಿಗೆ ಸರಪಳಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.