ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು, ಸೈಕಿಯಾಟ್ರಿ ಸ್ಪೆಷಾಲಿಟಿ ಬ್ಲಾಕ್, ಸೆಂಟ್ರಲ್ ಲ್ಯಾಬೋರೇಟರಿ ಕಾಂಪ್ಲೆಕ್ಸ್ ಮತ್ತು ಭೀಮಾ ಹಾಸ್ಟೆಲ್ ನ್ನು ಉದ್ಘಾಟಿಸಿದರು. ಅತ್ಯಾಧುನಿಕ ರೋಗನಿರ್ಣಯ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಬಳಿಕ ಮಾತನಾಡಿದ ರಾಷ್ಟ್ರಪತಿ, ಸಮಗ್ರ ಔಷಧ ಸೇವೆ ಒದಗಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆ ಮಾದರಿಯಾಗಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಚಾರದಲ್ಲಿ ಯೋಗ ಮತ್ತು ಆಯುರ್ವೇದದ ಅಪ್ಲಿಕೇಶನ್ ಅನುಕರಣೆ ಯೋಗ್ಯವಾಗಿದೆ. ನಕಾರಾತ್ಮಕ ಮಾನಸಿಕ ಸ್ಥಿತಿಯನ್ನು ಎದುರಿಸಲು ವಿವಿಧ ರೀತಿಯ ಧ್ಯಾನಗಳು ಸಹ ಉಪಯುಕ್ತವಾಗಿವೆ ಎಂದರು.
ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಮಾತನಾಡಿ, ಜಗತ್ತಿನ ಅತ್ಯುತ್ತಮ 200 ಆಸ್ಪತ್ರೆಗಳಲ್ಲಿ ನಿಮ್ಹಾನ್ಸ್ ಕೂಡ ಒಂದಾಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ವಾರ್ಷಿಕ 7 ಲಕ್ಷ ಜನ ಚಿಕಿತ್ಸೆ ಪಡೆಯುತ್ತಾರೆ. ಹೊಸದಾಗಿ ಸಹ ಕೆಲವು ಸೇವೆಗಳನ್ನು ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಹೇಳಿದರು. ಮಾನಸಿಕ ಆರೋಗ್ಯ ವಿಚಾರದಲ್ಲಿ ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ. ರಾಜ್ಯದಾದ್ಯಂತ ಮಾನಸಿಕ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ನಿಮ್ಹಾನ್ಸ್ ನೊಂದಿಗೆ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬಸ್ ಪ್ರಯಾಣ ದರ ಏರಿಕೆ; ಬಿಜೆಪಿ ಪ್ರತಿಭಟನೆ
ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ನಾಯಕರು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಿಶಿಷ್ಟವಾಗಿ ಪ್ರತಿಭಟಿಸಿದರು. ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನೇರವಾಗಿ ಪುರುಷ ಪ್ರಯಾಣಿಕರ ಬಳಿಗೆ ತೆರಳಿ ಗುಲಾಬಿ ಹೂ ನೀಡಿದರು. ಇನ್ನು ಮೇಲೆ ಗಂಡಸರು ಹೆಂಗಸರ ಟಿಕೆಟ್ ದರ ಸೇರಿಸಿ ಡಬಲ್ ಹಣ ಕೊಟ್ಟು ಪ್ರಯಾಣಿಸಬೇಕು ಎಂದು ಅಶೋಕ್ ಹೇಳಿದರು.
ಇದೇ ವೇಳೆ ತಮ್ಮನ್ನು ತಡೆಯಲು ಪ್ರಯತ್ನಿಸಿದ ಪೊಲೀಸರ ವಿರುದ್ಧ ಗರಂ ಆದ ಆರ್. ಅಶೋಕ್, ನನ್ನನ್ನು ವಶಕ್ಕೆ ಪಡೆದರೆ ಕೋರ್ಟ್ ಗೆ ಹೋಗುವೆ. ನನ್ನನ್ನು ಮುಟ್ಟಿದರೆ ಹುಷಾರ್. ಜನ್ಮದಲ್ಲಿ ನೆನಪಿನಲ್ಲಿಟ್ಟು ಕೊಳ್ಳಬೇಕು ಹಾಗೆ ಮಾಡುವೆ ಎಂದು ಕಿಡಿಕಾರಿದರು. ಈ ನಡುವೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆಗೆ ಹಿಂದಿನ ಬಿಜೆಪಿ ಕಾರಣವಾಗಿದೆ. ಹಿಂದಿನ ಸರ್ಕಾರ ನಮ್ಮ ಮೇಲೆ ರೂ. 5,900 ಕೋಟಿ ಸಾಲವನ್ನು ಬಿಟ್ಟು ಹೋಗಿದ್ದಾರೆ. ದೈನಂದಿನ ನಿರ್ವಹಣಾ ವೆಚ್ಚ ಮತ್ತು ವೇತನ ಹೆಚ್ಚಾಗಿರುವುದರಿಂದ ದರ ಏರಿಕೆ ಅಗತ್ಯವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಮಾರ್ಗ ಬದಲಿಸಿದ ಚಾಲಕ; ಆಟೋದಿಂದ ಹೊರಕ್ಕೆ ಹಾರಿದ ಮಹಿಳೆ
ಆ್ಯಪ್‌ನಲ್ಲಿ ತೋರಿಸಿದ ಮಾರ್ಗಕ್ಕಿಂತ ಚಾಲಕ ಬೇರೆ ಮಾರ್ಗವನ್ನು ಹಿಡಿದ ಕಾರಣ 30 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿ ಚಲಿಸುತ್ತಿದ್ದ ಆಟೋದಿಂದ ಜಿಗಿದ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಪದೇ ಪದೇ ನಿಲ್ಲಿಸುವಂತೆ ಕೇಳಿಕೊಂಡರೂ ಚಾಲಕ ಕೇಳದ ಕಾರಣ, ರಸ್ತೆಯ ಹಂಪ್ ಬಳಿ ಆಟೋ ನಿಧಾನಗೊಂಡಾಗ ಆಕೆ ಕೆಳಗೆ ಹಾರಿದ್ದಾಳೆ. ಸಂತ್ರಸ್ತೆ ನಮ್ಮ ಯಾತ್ರಿ ಆ್ಯಪ್‌ನಲ್ಲಿ ಹೊರಮಾವುನಿಂದ ಥಣಿಸಂದ್ರಕ್ಕೆ ಹೋಗಲು ಆಟೋ ಬುಕ್ ಮಾಡಿದ್ದರು. ಹೆಬ್ಬಾಳ ರಸ್ತೆಯಲ್ಲಿ ಆಕೆಗೆ ತೊಂದರೆಯಾಯಿತು. ಚಾಲಕ ಮದ್ಯದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಮಹಿಳೆಯ ಪತಿ X ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಪೊಲೀಸರು ತಕ್ಷಣ ಸ್ಪಂದಿಸಿ ತನಿಖೆ ಆರಂಭಿಸಿದ್ದಾರೆ.
ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ; ಮಧುಗಿರಿ ಡಿವೈಎಸ್‌ಪಿ ಅಮಾನತು
ದೂರು ನೀಡಲು ಬಂದ ಮಹಿಳೆಯನ್ನೇ ತನ್ನ ಕಾಮತೃಷೆಗೆ ಬಳಸಿಕೊಂಡ ಆರೋಪದ ಮೇರೆಗೆ ತುಮಕೂರು ಜಿಲ್ಲೆ ಮಧುಗಿರಿ ಉಪ ವಿಭಾಗದ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಡಿವೈಎಸ್‌ಪಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು.
ಜಮೀನು ವ್ಯಾಜ್ಯದ ಬಗ್ಗೆ ಪಾವಗಡ ಮೂಲದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಸಂಬಂಧ ವಿಚಾರಿಸುವ ಸಲುವಾಗಿ ಮಹಿಳೆಯನ್ನು ಕಚೇರಿಗೆ ಕರೆಯಿಸಿದ ಆಕೆಯನ್ನು ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಕಾಮತೃಷೆಗೆ ಬಳಸಿಕೊಂಡಿದ್ದರು. ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ವ್ಯಕ್ತಿಯೊಬ್ಬರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ಮಧ್ಯೆ ಅವರನ್ನು ಡಿಜಿ ಮತ್ತು ಐಜಿಪಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.