ದಾವಣಗೆರೆ: ಬಾಕಿ ಹಣ ಬಿಡುಗಡೆ ಮಾಡಿ ಇಲ್ಲವೇ, ದಯಾಮರಣ ಕರುಣಿಸಿ ಎಂದು ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಹರಿಹರದ ವಾರ್ಡ್ 29 ರ ಖಬರಸ್ಥಾನ (ಸಮಾಧಿ ಸ್ಥಳ) ದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹರಿಹರದ ಗುತ್ತಿಗೆದಾರ ಮೊಹಮ್ಮದ್ ಮಜರ್ ಅವರು ಶೌಚಾಲಯ ನಿರ್ಮಿಸಿದ್ದು, ಕಾಮಗಾರಿ ಹಣ ಪಡೆಯಲು ವರ್ಷದಿಂದ ಕಚೇರಿಯಿಂದ ಕಚೇರಿಗೆ ಓಡಾಡುತ್ತಿದ್ದಾರೆ. ಆದರೆ, ಹರಿಹರ ನಗರ ಪುರಸಭೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ, ತಪ್ಪಿಸಿಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ಈ ವರ್ತನೆಯಿಂದ ಬೇಸತ್ತಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಬಾಕಿ ಹಣ ಬಿಡುಗಡೆ ಮಾಡಿ, ಇಲ್ಲವೇ ದಯಾ ಮರಣ ಕಲ್ಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಾನು ಕ್ಲಾಸ್ 1 ಗುತ್ತಿಗೆದಾರನಾಗಿದ್ದು, 2023 ರಲ್ಲಿ ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಅನುದಾನದಡಿಯಲ್ಲಿ ಶೌಚಾಲಯ ಮತ್ತು ಒಳಚರಂಡಿ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಡಿಸೆಂಬರ್ 7, 2023 ಪರಿಶೀಲನೆ ಪೂರ್ಣಗೊಂಡಿದೆ. ಆದರೆ, ಒಂದು ವರ್ಷ ಕಳೆದರೂ ಹಣವನ್ನು ಬಿಡುಗಡೆ ಮಾಡಿಲ್ಲ. ಜಿಲ್ಲಾಧಿಕಾರಿ ಮತ್ತು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇನೆ. ವಾರ್ಡ್ ಕೌನ್ಸಿಲರ್‌ಗಳೂ ಗಮನ ನೀಡುತ್ತಿಲ್ಲ. ಅವರಿಗೆ ಕಮಿಷನ್ ಪಾವತಿಸಿದ್ದೇನೆ, ಕಾಮಗಾರಿ ಕೆಲಸಕ್ಕಾಗಿ ಸಾಲ ಮಾಡಿದ್ದೇನೆ. ಇಲ್ಲಿಯವರೆಗೆ 2-3 ಲಕ್ಷ ರೂ ಬಡ್ಡಿ ಪಾವತಿಸಿದ್ದೇನೆ. ಸಾಲ ಇನ್ನೂ ಬಾಕಿ ಉಳಿದಿದೆ. ನನ್ನ ಮಗಳ ವಿವಾಹ ಹತ್ತಿರ ಬರುತ್ತದೆ. ಇದೀಗ ಆಕೆಯ ಮದುವೆಗೆ ಈ ಹಣ ಹೊರತುಪಡಿಸಿದರೆ ಬೇರೆ ಯಾವುದೇ ಮೂಲವಿಲ್ಲ. ಅಧಿಕಾರಿಗಳ ಆಲಸ್ಯ ಮನೋಭಾವದಿಂದ ಅಂತಿಮವಾಗಿ ದಯಾ ಮರಣದ ತೀರ್ಮಾನಕ್ಕೆ ಬಂದಿದ್ದೇನೆ, ಆದ್ದರಿಂದ ನನಗೆ ಸಾಯಲು ಅವಕಾಶ ನೀಡುವಂತೆ ವಿನಂತಿಸುತ್ತೇನೆಂದು ಪತ್ರದಲ್ಲಿ ಹೇಳಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್ ಅವರು ಪ್ರತಿಕ್ರಿಯಿಸಿ ಎಸ್‌ಎಫ್‌ಸಿ ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದಿರುವುದು ಬಹಿರಂಗ ಭ್ರಷ್ಟಾಚಾರದ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದ್ದಾರೆ.