ಬಿಬಿಎಂಪಿ ಕಚೇರಿ 
ರಾಜ್ಯ

BBMP ಕೇಂದ್ರ ಕಚೇರಿ ಮೇಲೆ ED ದಾಳಿ: 960 ಕೋಟಿ ರೂ ಮೊತ್ತದ ಬೋರ್‌ವೆಲ್ ಹಗರಣ ಆರೋಪ!

2016ರಲ್ಲಿ ನಡೆದಿದೆ ಎನ್ನಲಾದ ಬೋರ್‌ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ 960 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತರ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ದಿಢೀರ್ ದಾಳಿ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಏಳು ಇಡಿ ಅಧಿಕಾರಿಗಳ ತಂಡ ಕೇಂದ್ರ ಕಚೇರಿಯಲ್ಲಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರ ಕಚೇರಿಯಲ್ಲಿ ಶೋಧ ನಡೆಸಿದೆ.

2016ರಲ್ಲಿ ನಡೆದಿದೆ ಎನ್ನಲಾದ ಬೋರ್‌ವೆಲ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಕೊರೆಸಿದ್ದ ಬೋರ್‌ವೆಲ್‌ನಲ್ಲಿ 960 ಕೋಟಿ ರೂಪಾಯಿ ಪೈಕಿ 400 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು ಇದೇ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಎಇ, ಎಇಇಗಳನ್ನೂ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ದಾಳಿ ವೇಳೆ ಇಡಿ ಅಧಿಕಾರಿಗಳು ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸಂಗ್ರಹಿಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA)ಯ ನಿಬಂಧನೆಗಳ ಅಡಿಯಲ್ಲಿ ಬಿಬಿಎಂಪಿಗೆ ಸಂಬಂಧಿಸಿದ ಸುಮಾರು ಆರು ಕಚೇರಿಗಳನ್ನು ಶೋಧಿಸಲಾಗಿದೆ. 2016ರಿಂದ 2019ರ ನಡುವೆ ಬೋರ್‌ವೆಲ್ ಮತ್ತು ಆರ್‌ಒ ಪ್ಲಾಂಟ್‌ಗಳ ಬಗ್ಗೆ 2020ರ ಜೂನ್ 16ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದೇನೆ ಎಂದು ಬಿಜೆಪಿ ಮುಖಂಡ ರಮೇಶ್ ತಿಳಿಸಿದರು.

ಕಾವೇರಿ ನೀರು ಪೂರೈಕೆಯಾಗದ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಈ ಯೋಜನೆ ಜಾರಿಗೆ ತರಲಾಗಿತ್ತು. 960 ಕೋಟಿ ರೂ.ಗಳ ಕಾಮಗಾರಿಗೆ ಸಂಬಂಧಿಸಿದಂತೆ 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬಹುಕೋಟಿ ಹಗರಣ ಆಗಿರುವುದರಿಂದ ಎಸಿಬಿ ಈ ಪ್ರಕರಣವನ್ನು ಇಡಿಗೆ ವಹಿಸಿದ್ದು, ಇಂದು ಬಿಬಿಎಂಪಿಯಲ್ಲಿ ಶೋಧ ನಡೆಸಲಾಗಿದೆ ಎಂದು ರಮೇಶ್ ತಿಳಿಸಿದರು. ರಾಜರಾಜೇಶ್ವರಿನಗರ, ದಾಸರಹಳ್ಳಿ, ಯಲಹಂಕ, ಮಹದೇವಪುರ, ಬೊಮ್ಮನಹಳ್ಳಿಯ 66 ಬಿಬಿಎಂಪಿ ವಲಯಗಳ ಪೈಕಿ 50 ವಲಯಗಳಲ್ಲಿ ಕೌನ್ಸಿಲರ್‌ಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು 400 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ರಾಜರಾಜೇಶ್ವರಿನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಕೃಷ್ಣರಾಜಪುರ, ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಗರಿಷ್ಠ ಲೂಟಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಪಾಲಿಕೆಯು ಬೋರ್‌ವೆಲ್‌ ಕೊರೆಯಲು 671.16 ಕೋಟಿ ಹಾಗೂ ಆರ್‌ಒ ಘಟಕಗಳ ನಿರ್ಮಾಣಕ್ಕೆ 156 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ರಮೇಶ್ ತಿಳಿಸಿದರು. ಈ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 9,588 ಬೋರ್‌ವೆಲ್‌ಗಳನ್ನು ಕೊರೆಸಿರುವ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದರು. ಅದರಂತೆ ಬೋರ್ ವೆಲ್ ಕೊರೆಸಲು ಸರಾಸರಿ ಏಳು ಲಕ್ಷ ರೂಪಾಯಿ ಹಾಗೂ ಆರ್ ಒ ಘಟಕ ನಿರ್ಮಾಣಕ್ಕೆ 16 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಲಾಗುತ್ತಿದೆ. ಹೀಗಾಗಿ ಬೆಂಗಳೂರು ಮಹಾನಗರ ಕಾರ್ಯಪಡೆ ಮತ್ತು ಲೋಕಾಯುಕ್ತಕ್ಕೂ ದೂರು ನೀಡಿದ್ದೇನೆ ಎಂದು ರಮೇಶ್ ಹೇಳಿದರು.

ದಾಳಿಗಳ ಬಗ್ಗೆ ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿ ಎಸ್ ಪ್ರಹ್ಲಾದ್ ಅವರು ಇಡಿ ತಮ್ಮ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ. ಅಧಿಕಾರಿಗಳು 2016 ಮತ್ತು 2019ರ ನಡುವೆ ಸ್ಥಾಪಿಸಲಾದ ಬೋರ್‌ವೆಲ್‌ಗಳು ಮತ್ತು ಆರ್‌ಒ ಘಟಕಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಗಾಗಿ ಬಂದಿದ್ದಾರೆ ಎಂದು ತಿಳಿಸಿದರು. ಇಡಿ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ನಾವು ಅವರಿಗೆ ಸಹಕರಿಸುತ್ತಿದ್ದೇವೆ. ನಾವು ದಾಖಲೆಗಳನ್ನು ನೀಡುತ್ತಿದ್ದೇವೆ. ಅವರು ಏನು ಕೇಳುತ್ತಾರೋ ಅದನ್ನು ನಾವು ನೀಡುತ್ತೇವೆ ಎಂದು ಪ್ರಹ್ಲಾದ್ ಹೇಳಿದರು. ಜತೆಗೆ ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಸಭೆ ನಡೆಯುತ್ತಿದೆ. ನಾವು ಅವರನ್ನು ಇಡಿ ಅಧಿಕಾರಿಗಳಿಗೆ ಪರಿಚಯಿಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT