ಬೆಂಗಳೂರು: ಇತ್ತೀಚೆಗಷ್ಟೇ ನಗರದ ವಿವಿಧೆಡೆ ಬಿಬಿಎಂಪಿ ಕಚೇರಿಗಳಿಗೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ದಿಢೀರ್ ಕಾರ್ಯಾಚರಣೆ ಕೈಗೊಂಡ ಹಲವು ಲೋಪದೋಷಗಳನ್ನು ಬಯಲಿಗೆಳೆದಿದ್ದರು. ಇದರ ಬೆನ್ನಲ್ಲೇ ಮತ್ತೆ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಿ, ನ್ಯೂನತೆಗಳನ್ನು ಬಹಿರಂಗಪಡಿಸಿದ್ದಾರೆ.
ಗುರುವಾರ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ 12 ತಂಡಗಳು ಮತ್ತೆ ಬಿಬಿಎಂಪಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಜಯನಗರ, ವಸಂತನಗರ, ಗಾಂಧಿನಗರ, ಶಿವಾಜಿನಗರ, ಗೋವಿಂದರಾಜನಗರ ಕಂದಾಯ ಅಧಿಕಾರಿಗಳ ಮತ್ತು ಸಹಾಯ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ, ಬಿಬಿಎಂಪಿ ಸಿಬ್ಬಂದಿಗಲ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಿದರು. ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ನ್ಯಾ.ಕೆ.ಎನ್.ಫಣೀಂದ್ರ ಅವರು ಗರಂ ಆದರು.
ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾ.ಕೆ.ಎನ್.ಫಣೀಂದ್ರ ಅವರು, ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾತಿ ದಾಖಲಾತಿ, ರಿಜಿಸ್ಟರ್ ಮತ್ತು ನಗದು ಘೋಷಣೆ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ, ಕಡ್ಡಾಯವಾಗಿದ್ದರೂ ರಿಜಿಸ್ಟರ್‌ಗಳನ್ನು ಏಕೆ ನಿರ್ವಹಿಸಿಲ್ಲ ಎಂಬುದಕ್ಕೆ ಸರಿಯಾದ ಕಾರಣವನ್ನೂ ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.
ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಇಬ್ಬರು ಕಾರ್ಮಿಕರ ಹಾಜರಾತಿಯನ್ನೂ ಕೂಡ ನಿರ್ವಹಿಸುತ್ತಿಲ್ಲ. ಅವರು ಕಚೇರಿಯಲ್ಲಿಯೇ ಇರಲಿಲ್ಲ. ಇವರನ್ನು ನೇಮಿಸಲಾಗಿದೆಯೇ ಅಥವಾ ಅವರ ಹೆಸರಿನಲ್ಲಿ ಸಂಬಳ ಮಾತ್ರ ನೀಡಲಾಗುತ್ತಿದೆಯೇ ಎಂಬುದರ ಕುರಿತು ಅನುಮಾನಗಳು ಮೂಡಿವೆ.
ನಗರದಲ್ಲಿನ ಅನಧಿಕೃತ ಕಟ್ಟಡಗಳ ತಡೆಯಲು ಕಂದಾಯ ಅಧಿಕಾರಿಗಳು ಪ್ರಯತ್ನಗಳನ್ನು ಮಾಡುತ್ತಿಲ್ಲ. ಪರಿಶೀಲಿಸಿದಾಗ ಅಕ್ರಮ ನಿರ್ಮಾಣಗಳನ್ನು ಸಹಾಯಕ ಎಂಜಿನಿಯರ್ ಗಮನಕ್ಕೆ ತರಲಾಗುತ್ತಿದೆ, ಅವರು ಅದನ್ನು ಮುಖ್ಯ ಎಂಜಿನಿಯರ್ ಗಮನಕ್ಕೆ ತಂದು, ಕಟ್ಟಡಗಳ ನೆಲಸಮಕ್ಕೆ ಟೆಂಡರ್ ಆಹ್ವಾನಿಸಿದ್ದಾರೆಂದು ಹೇಳಿದ್ದಾರೆ.
ಅಂತಹ ಎಷ್ಟು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ ಎಂದು ಕೇಳಿದಾಗ, ಯಾವುದೇ ಮಾಹಿತಿ ನೀಡಲಿಲ್ಲ. ಪಾಲಿಕೆಗೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ನಿಗಾ ಇಲ್ಲ, ಹೀಗಾಗಿಯೇ ಅವರು ಹೊಣೆಗಾರಿಕೆ ಹೊತ್ತುಕೊಳ್ಳುತ್ತಿಲ್ಲ. ಹೀಗಾಗಿಯೇ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಲವಾರು ದೂರುಗಳನ್ನು ಪರಿಶೀಲಿಸಲು ಬೃಹತ್ ಅಭಿಯಾನ ಆರಂಭಿಸಲಾಗಿದ್ದು, ಇದರ ಭಾಗವಾಗಿ ದಿಢೀರ್ ಪರಿಶೀಲನೆ ನಡೆಸಲಾಗುತ್ತಿದೆ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕಾಗಿ ವರದಿ ಪಡೆದು, ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.