ಸಾರಿಗೆ ಇಲಾಖೆ ಅಧಿಕಾರಿಗಳು 
ರಾಜ್ಯ

ಮನಸೋ ಇಚ್ಚೆ ಪ್ರಯಾಣಿಕರಿಂದ ದರ ವಸೂಲಿ: ಆಟೋ ಚಾಲಕರಿಗೆ RTO ಶಾಕ್; 114 ಆಟೋ ಸೀಜ್, 299 ಪ್ರಕರಣ ದಾಖಲು

ನಗರದಲ್ಲಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು: ಸಾರ್ವಜನಿಕರಿಂದ ನಿಗದಿಗಿಂತಲೂ ಅಧಿಕ ಪ್ರಯಾಣ ದರ ವಸೂಲಿ ಮಾಡುತ್ತಿರುವ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಶಾಕ್ ನೀಡಿದ್ದು, ಒಂದೇ ದಿನ 299 ಪ್ರಕರಣ ದಾಖಲಿಸಿಕೊಂಡು, 114 ಆಟೋಗಳನ್ನು ಜಪ್ತಿ ಮಾಡಿದ್ದಾರೆ.

ಆ್ಯಪ್‌ ಆಧಾರಿತ ಆಟೋಗಳು ಹಾಗೂ ಇನ್ನಿತರೆ ಆಟೋ ಚಾಲಕರು ಪ್ರಯಾಣಿಕರಿಂದ ನಿಗದಿಗಿಂತ ಹೆಚ್ಚು ದರ ವಸೂಲಿ ಮಾಡುವ ಮೂಲಕ ಹಗಲು ದರೋಡೆಗಿಳಿದಿರುವ ದೂರುಗಳು ಬರುತ್ತಿವೆ. ಹೀಗಾಗಿ, ಅಧಿಕ ದರ ವಸೂಲಿ ಮಾಡುತ್ತಿರುವ ಆಟೋಗಳ ಪರ್ಮಿಟ್‌ ರದ್ದು ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಸೂಚನೆ ಬೆನ್ನಲ್ಲೇ ನಗರದಲ್ಲಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 299 ಪ್ರಕರಣ ದಾಖಲಿಸಿ, 114 ಆಟೋಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣದ ಅಧಿಕಾರಿಗಳು ಒಟ್ಟು 48 ಪ್ರಕರಣಗಳನ್ನು ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ಪಶ್ಚಿಮ 36 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ಕೇಂದ್ರ 19 ವಾಹನಗಳನ್ನು ವಶಪಡಿಸಿಕೊಳ್ಳುವ ಮೂಲಕ ವಾಹನ ವಶಪಡಿಸಿಕೊಳ್ಳುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಂಸದ ಪಿಸಿ.ಮೋಹನ್ ಅವರು, ಆಟೋ ಚಾಲಕರು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿರುವುದಕ್ಕೆ ಕಿಡಿಕಾರಿದ್ದರು.

ಕರ್ನಾಟಕ ಹೈಕೋರ್ಟ್ ಮೇ 2024 ರಲ್ಲಿ ಆಟೋ ದರಗಳಿಗೆ ಮಿತಿ ವಿಧಿಸಿತು. ಆಟೋ ಚಾಲಕರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಉಲ್ಲಂಘನೆ ಮುಂದುವರಿಯಲು ಸಾಧ್ಯವಿಲ್ಲ. ದೇಶದ ಕಾನೂನು ಸರ್ವೋಚ್ಚವಾಗಿದೆ. ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು, ಅಕ್ರಮ ಪರವಾನಗಿಗಳನ್ನು ರದ್ದುಗೊಳಿಸಬೇಕು, ಅಗ್ರಿಗೇಟರ್ ಪರವಾನಗಿಗಳನ್ನು ರದ್ದುಗೊಳಿಸಬೇಕು ಮತ್ತು ಪ್ರಯಾಣಿಕರನ್ನು ಶೋಷಣೆಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದ್ದರು.

ಆ್ಯಪ್ ಗಳ ಮೂಲಕ ನಗರದಲ್ಲಿ 1.5 ಕಿ.ಮೀ. ಪ್ರಯಾಣಕ್ಕೆ 70 ರೂ.ಗಳಿಗಿಂತ ಹೆಚ್ಚು ಹಣ ವಿಧಿಸಲಾಗುತ್ತಿದೆ. ನಗರದಲ್ಲಿ ಶುಲ್ಕ ನಿಯಂತ್ರಣ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಸರ್ಕಾರವು ಮೂಲ ದರಗಳನ್ನು ನಿಗದಿಪಡಿಸಬೇಕು, ಮೀಟರ್‌ಗಳನ್ನು ಜಾರಿಗೊಳಿಸಬೇಕು ಮತ್ತು ಆ್ಯಪ್ ಕಾರ್ಟಲೈಸೇಶನ್ ಮತ್ತು ಡಿಜಿಟಲ್ ಏಕಸ್ವಾಮ್ಯದಿಂದ ಪ್ರಯಾಣಿಕರನ್ನು ರಕ್ಷಿಸಬೇಕು. ಅಧಿಕ ಶುಲ್ಕ ವಿಧಿಸುವುದರಿಂದ ನಾಗರಿಕರು 1,010 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ಅಧಿಕ ಶುಲ್ಕ ವಿಧಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

ಕ್ವಾಡ್ ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುವ ಯೋಜನೆ ಕೈ ಬಿಟ್ಟ ಟ್ರಂಪ್‌; ನ್ಯೂಯಾರ್ಕ್ ಟೈಮ್ಸ್ ವರದಿ

ಬಿಹಾರದಲ್ಲಿ ಆರಂಭವಾದ 'Voter Adhikar Yatra' ದೇಶಾದ್ಯಂತ ವಿಸ್ತರಿಸಲಿದೆ: ರಾಹುಲ್ ಗಾಂಧಿ

ರಾಜ್ಯದ ಜನತೆಗ ಮತ್ತೊಂದು ಶಾಕ್: ಆಸ್ತಿ ನೋಂದಣಿ ಶುಲ್ಕ ಹೆಚ್ಚಳ; ನಾಳೆಯಿಂದಲೇ ಜಾರಿ

SCROLL FOR NEXT