ಅಹಿತಕರ ಘಟನೆಯೊಂದರಲ್ಲಿ ಇತ್ತೀಚೆಗೆ ಕೊಲೆಯಾಗಿದ್ದ ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಪುತ್ರಿ ಕೃತಿಕಾ ಬೆಂಗಳೂರಿನ ತಮ್ಮ ನಿವಾಸ ಬಳಿಯ ಬ್ಯೂಟಿ ಪಾರ್ಲರ್ ನ್ನು ಧ್ವಂಸ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದ ಘಟನೆ ಸೋಮವಾರ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೃತಿಕಾ ಅವರು ನಂದಿನಿ ಪಾರ್ಲರ್ ಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಎಸೆದಿದ್ದು ಅವುಗಳೆಲ್ಲಾ ಪೀಸ್ ಪೀಸ್ ಆಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅಲ್ಲದೆ ಅಲ್ಲಿನ ಸಿಬ್ಬಂದಿಗೆ ಕೂಡ ಥಳಿಸಿದ್ದಾರೆ.
ನಡೆದಿದ್ದೇನು?
ಕೃತಿಕಾ ಸ್ವಲ್ಪ ಸಮಯದವರೆಗೆ ನಂದಿನಿ ಪಾರ್ಲರ್ ಹೊರಗೆ ನಿಂತು ಅಂಗಡಿ ಮಾಲೀಕರನ್ನು ದಿಟ್ಟಿಸಿ ನೋಡುತ್ತಿದ್ದರು. ಇದರಿಂದ ಆತಂಕಗೊಂಡ ಮಾಲೀಕರು ಅವರ ಬಳಿ ಬಂದು ವಿನಯದಿಂದ ಏನಾದರೂ ತಪ್ಪಾಗಿದೆಯೇ ಎಂದು ಕೇಳಿದರು. ಇದಕ್ಕೆ ಕೃತಿಕಾ ಆಕ್ರಮಣಕಾರಿಯಾಗಿ ವರ್ತಿಸಿದರು ಎಂದು ತಿಳಿದುಬಂದಿದೆ. ನಂತರ ಅವರು ಬ್ಯೂಟಿ ಪಾರ್ಲರ್ ಒಳಗೆ ನುಗ್ಗಿ ವಸ್ತುಗಳನ್ನು ಒಡೆದುಹಾಕಲು ಪ್ರಾರಂಭಿಸಿದರು, ಸಾಕಷ್ಟು ವಸ್ತುಗಳನ್ನು ಹಾನಿಗೊಳಿಸಿದರು. ಇವರ ವರ್ತನೆ ಕಂಡು ಅಲ್ಲಿದ್ದವರು ಬೆಚ್ಚಿಬಿದ್ದರು ಎಂದು ತಿಳಿದುಬಂದಿದೆ.
ಪಾರ್ಲರ್ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಕೃತಿಕಾ ಮಾಲೀಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಅವರು ಗಾಯಗೊಂಡರು. ಹಠಾತ್ ಪ್ರಕೋಪದಿಂದ ಭಯಭೀತರಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಬರುವ ಹೊತ್ತಿಗೆ, ಕೃತಿಕಾ ಏನೂ ಆಗಿಲ್ಲ ಎಂಬಂತೆ ವರ್ತಿಸುತ್ತಾ ಮನೆಗೆ ಹೋದರು ಎಂದು ತಿಳಿದುಬಂದಿದೆ.
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಕೊಲೆಯಾದ ನಂತರ ಕೃತಿಕಾ ಪರಿಸ್ಥಿತಿ ತುಂಬಾ ಹೀನಾಯ ಸ್ಥಿತಿಯಲ್ಲಿದೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಆಕೆಯ ತಂದೆ, ಮಾಜಿ ಉನ್ನತ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಕೊಲೆಯಾಗಿದ್ದು, ತಾಯಿ ಜೈಲಿನಲ್ಲಿದ್ದಾರೆ. ಆಕೆಯ ಸಹೋದರ ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಕೃತಿಕಾ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ.