ಬೆಂಗಳೂರು: ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿದೆ.
ರಾಜ್ಯ ಸರ್ಕಾರದ ನಿರ್ಧಾರ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಕನ್ನಡವನ್ನು ಬದಿಗಿಡಲಾಗುತ್ತಿರುವ ಈ ಉಪಕ್ರಮವನ್ನು ಕೆಡಿಎ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇತರ ಭಾಷೆಗಳನ್ನು ಕಲಿಯುವುದು ತಪ್ಪಲ್ಲ, ಆದರೆ ಈ ಪ್ರಕ್ರಿಯೆಯಲ್ಲಿ ಕನ್ನಡವನ್ನು ಬದಿಗಿಡುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.
ನಾಡಿನ ಅಭಿವೃದ್ಧಿ ಎನ್ನುವುದು ಸಂಪೂರ್ಣವಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿಗೆ ಕಲಿಕಾ ವ್ಯವಸ್ಥೆಯೇ ನಿರ್ಣಾಯಕ ಪಾತ್ರವನ್ನು ಹೊಂದಿರುತ್ತದೆ. ವಿಶ್ವದ್ಯಾಂತ ನಡೆಸಿರುವ ಅಧ್ಯಯನಗಳಲ್ಲಿ ಪ್ರಾರಂಭಿಕವಾಗಿ ತಾಯ್ನುಡಿಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಸುವುದೇ ಜ್ಞಾನಾರ್ಜನೆಯ ದೃಷ್ಠಿಯಿಂದ ಬುನಾದಿ ಎಂಬುದನ್ನು ನಿರೂಪಿಸಿವೆ.
2013-18ರಲ್ಲಿ ಸರಕಾರವು ಮಕ್ಕಳ ಹಕ್ಕು ಕಾಯ್ದೆಯ ಪ್ರಕರಣ 29 (ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸದನಗಳಲ್ಲಿ ಮಂಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಿದ್ದು, ಅದರಂತೆ ಕನಿಷ್ಟ 8ನೇ ತರಗತಿವರೆಗೆ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ರೂಪಿಸಿರುವ ಕನ್ನಡ ಕಲಿಕಾ ಅಧಿನಿಯಮ 2015ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅಲ್ಲದೇ, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಿ ಸರಕಾರವು ಈ ಶಾಲೆಗಳ ಬೆಂಬಲಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅಗತ್ಯವನ್ನು ಪ್ರತಿಪಾದಿಸಿದ್ದು, ತನ್ನ ನಿರ್ಧಾರವನ್ನು ಎಲ್ಲ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದೆ. ರಾಜ್ಯ ಶಿಕ್ಷಣ ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿಯೂ ಪ್ರಾಧಿಕಾರವು ಇದೇ ಸಲಹೆಯನ್ನು ನೀಡಿದ್ದು, ಜುಲೈ ಅಂತ್ಯಕ್ಕೆ ಸಲ್ಲಿಕೆಯಾಗುವ ಶಿಕ್ಷಣ ನೀತಿಯ ವರದಿಯನ್ನು ಕಾಯುತ್ತಿದ್ದೇವೆ. ವರದಿಯ ಸಂಪೂರ್ಣ ಅಧ್ಯಯನವನ್ನು ನಡೆಸಿ ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅನುಷ್ಠಾನಕ್ಕೆ ಸಾರ್ವಜನಿಕ ಒಮ್ಮತವನ್ನು ಮೂಡಿಸುವಲ್ಲಿ ಪ್ರಾಧಿಕಾರವು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 4137 ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳ ಸಂಖ್ಯೆ 8738ಕ್ಕೆ ಏರಿಕೆಯಾಗಿದೆ. ಮೊದಲ ಬಾರಿ 2019–20ನೇ ಸಾಲಿನಲ್ಲಿ 1000 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆಗೆ ಇಂಗ್ಲಿಷ್ ಮಾಧ್ಯಮಕ್ಕೂ (ದ್ವಿಭಾಷಾ ಮಾಧ್ಯಮ) ರಾಜ್ಯ ಸರ್ಕಾರ ಅವಕಾಶ ನೀಡಿತ್ತು.
2025–26ನೇ ಸಾಲಿನಲ್ಲಿ ಹೊಸದಾಗಿ 4000 ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲೇ ಘೋಷಿಸಿದ್ದರು. ರಾಜ್ಯದ 33 ಶೈಕ್ಷಣಿಕ ಜಿಲ್ಲೆಗಳ 11555 ಶಾಲೆಗಳಿಂದ ದ್ವಿಭಾಷಾ ಮಾಧ್ಯಮಕ್ಕೆ ಬೇಡಿಕೆ ಬಂದಿದ್ದು ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಪರಿಶೀಲನೆ ನಡೆಸಿ 4137 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳಲ್ಲೇ 1465 ಶಾಲೆಗಳಿವೆ. ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಬೇಕು ಎಂದು ಇಲಾಖೆ ಸೂಚಿಸಿದೆ.