ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ಸಂಸದ ತೇಜಸ್ವಿ ಸೂರ್ಯ ಅವರು ಕಾನೂನು ಸಮರ ಆರಂಭಿಸಿದ್ದಾರೆ.
ದರ ಏರಿಕೆ ಪರಿಷ್ಕರಣೆ ಸಮಿತಿ ವರದಿ ಬಿಡುಗಡೆ ಆಗ್ರಹಿಸಿ ತೇಜಸ್ವಿ ಸೂರ್ಯ ಅವರು ಕೋರ್ಟ್ ಮೊರೆ ಹೋಗಿದ್ದು, ತಮ್ಮ ರಿಟ್ ಅರ್ಜಿಯನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗಿದೆ ಎಂದು ತೇಜಸ್ವಿ ಸೂರ್ಯ ಅವರು ಭಾನುವಾರ ಮಾಹಿತಿ ನೀಡಿದ್ದಾರೆ.
ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ಕ್ರಮವನ್ನು ಅಪಾರದರ್ಶಕ ಎಂದು ಕರೆದಿರುವ ತೇಜಸ್ವಿ ಸೂರ್ಯ ಅವರು, ಮೆಟ್ರೋ ಶುಲ್ಕ ಸಮಿತಿ ವರದಿಯನ್ನೇಕ ಗೌಪ್ಯವಾಗಿಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ತೆರಿಗೆದಾರರಿಂದ ಹಣಕಾಸು ನೆರವು ಪಡೆದು ಅಧ್ಯಯನಕ್ಕಾಗಿ ಅಂತರಾಷ್ಟ್ರೀಯ ಪ್ರವಾಸ ಕೈಗೊಂಡಿದ್ದಿರಿ. ಆದರೆ, ಅಧ್ಯಯನದ ವರದಿಯನ್ನೇಗೆ ಬಹಿರಂಗಪಡಿಸುತ್ತಿಲ್ಲ. ದೆಹಲಿ ಸೇರಿದಂತೆ ದೇಶದ ಇತರ ಎಲ್ಲಾ ಮೆಟ್ರೋ ವ್ಯವಸ್ಥೆಗಳನ್ನು ಹೊಂದಿರುವ ನಗರಗಳೂ ಎಫ್‌ಎಫ್‌ಸಿ ವರದಿಗಳನ್ನು ಸಾರ್ವಜನಿಕಗೊಳಿಸಿವೆ. ಬೆಂಗಳೂರಿನಲ್ಲೇಕೆ ಬಿಡುಗಡೆ ಮಾಡುತ್ತಿಲ್ಲ? ಸರ್ಕಾರ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಪ್ರಯಾಣ ದರ ಏರಿಕೆಯು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದೆ, ನಮ್ಮ ಮೆಟ್ರೋವನ್ನು ಭಾರತದ ಅತ್ಯಂತ ದುಬಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸಾಲಿಗೆ ತಳ್ಳಲಾಗಿದೆ. ಈ ಶುಲ್ಕ ರಚನೆಯು ಅನೇಕ ಮಧ್ಯಮ ವರ್ಗದ ಪ್ರಯಾಣಿಕರಿಗೆ ಕೈಗೆಟುಕುವಂತಿಲ್ಲ ಎಂದು ಹೇಳಿದ್ದಾರೆ.
ಕಾನೂನು ಅಥವಾ ಭದ್ರತಾ ಕಾರಣಗಳಿಲ್ಲದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನೇಕೆ ತಡೆಹಿಡಿಯುತ್ತಿದ್ದಾರೆ. ಸಾರ್ವಜನಿಕ ಸಾರಿಗೆಯು ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದನ್ನು ಬಳಸುವ ಸಾರ್ವಜನಿಕರಿಗೆ ಜವಾಬ್ದಾರಿಯುತವಾಗಿರಬೇಕು. ಇದೀಗ ಸರ್ಕಾರದ ನಡೆಯನ್ನು ವಿರೋಧಿಸಿ ಕಾನೂನು ಸಮರಕ್ಕಿಳಿಯುತ್ತಿದ್ದು, ನ್ಯಾಯಸಮ್ಮತೆಗಾಗಿ ಹೋರಾಟ ಆರಂಭಿಸಿದ್ದೇನೆ. ನಮ್ಮ ಬೆಂಗಳೂರು ಇಡೀ ಭಾರತಕ್ಕೆ ಸಾರ್ವಜನಿಕ ಸಾರಿಗೆಯಲ್ಲಿ ಮಾದರಿಯಾಗುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ತಿಳಿಸಿದ್ದಾರೆ.