ಬೆಂಗಳೂರು: ದೇಶದ ಅತಿ ದೊಡ್ಡ ಅನಾನಸ್ ಬೆಳೆಯುವ ಪ್ರದೇಶವಾದ ಕೇರಳದ ವಝಕುಲಂನಲ್ಲಿ ಭಾರಿ ಮಳೆಯಾಗಿದ್ದು, ಕೊಯ್ಲಿನ ಮೇಲೆ ಪರಿಣಾಮ ಬೀರಿದೆ. ಇದರಿಂದ ರಾಜ್ಯಕ್ಕೆ ಪೂರೈಕೆ ಕಡಿಮೆಯಾಗಿದೆ.
ಪರಿಣಾಮವಾಗಿ ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಮಂಡ್ಯ, ತುಮಕೂರು, ಮಂಗಳೂರು ಮತ್ತು ಉಡುಪಿಯಂತಹ ಇತರ ಜಿಲ್ಲೆಗಳಲ್ಲಿಯೂ ಬೆಲೆಗಳು ಕನಿಷ್ಠ ಶೇ.50ರಷ್ಟು ಹೆಚ್ಚಳವಾಗಿದ್ದು, ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಗಟು ಬೆಲೆ ಕೆಜಿಗೆ ಸುಮಾರು 45 ರೂ.ಗಳಿಂದ 80 ರೂ.ಗಳಿಗೆ ಏರಿಕೆಯಾಗಿದೆ. ಕೇರಳದಲ್ಲಿ ಸಾರಿಗೆ ಮಾರ್ಗಗಳು ಮುಚ್ಚಿಹೋಗಿ ಜಲಾವೃತಗೊಂಡಿರುವುದರಿಂದ, ದೈನಂದಿನ ಪೂರೈಕೆ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ನಾವು ಮಾರಾಟ ಮಾಡುವ ಹೆಚ್ಚಿನ ಪಾಲು ಕೇರಳದ ಅನಾನಸ್‌ಗಳದ್ದೇ ಆಗಿದೆ. ಆದರೆ ಈಗ, ಕೇವಲ ಒಂದು ಅಥವಾ ಎರಡು ಟ್ರಕ್‌ಗಳು ಬರುತ್ತಿವೆ. ಎಷ್ಟೇ ಬಂದರೂ ಅದು ವೇಗವಾಗಿ ಮಾರಾಟವಾಗುತ್ತಿದೆ. ಬೆಲೆಗಳು ಗಗನಕ್ಕೇರಿವೆ ಎಂದು ಕೆಆರ್ ಮಾರುಕಟ್ಟೆಯ ಸಗಟು ವ್ಯಾಪಾರಿ ರಂಜನ್ ಎಂ ಎಂಬುವವರು ಹೇಳಿದ್ದಾರೆ.
ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳು ಮಾತ್ರವೇ ಅನಾನಸ್ ಕೃಷಿ ಸೀಮಿತವಾಗಿದೆ. ಇವು ಪೂರೈಕೆ ಸ್ಥಿರವಾಗಿಲ್ಲ. ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ. ಪ್ರಸ್ತುತದ ಪರಿಸ್ಥಿತಿಯಿಂದಾಗಿ ಸ್ಥಳೀಯ ರೈತರು ನಷ್ಟವನ್ನು ಎದುರಿಸುವಂತಾಗಿದೆ ಎಂದು ಬೆಂಗಳೂರಿನ ಮತ್ತೊಬ್ಬ ವ್ಯಾಪಾರಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಯಾವುದೇ ಪ್ರಮುಖ ಹಬ್ಬಗಳು ಅಥವಾ ಮದುವೆ ಸಮಾರಂಭಗಳು ಇರದ ಹಾಗೂ ಬೇಡಿಕೆಗಳು ಇರದ ಕಾರಣ ನಾವು ಕಟಾವು ಮಾಡಿದ ತರಕಾರಿ-ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಇದೀಗ ಬೆಲೆಗಳು ಇದ್ದಕ್ಕಿದ್ದಂತೆ ಏರಿಕೆಯಾಗಿವೆ, ಆದರೆ, ಲಾಭ ಪಡೆಯಲು ನಮ್ಮಲ್ಲಿ ಇದೀಗ ದಾಸ್ತಾನುಗಳಿಲ್ಲ ಎಂದು ದಕ್ಷಿಣ ಕನ್ನಡದ ಬೆಳ್ತಂಗಡಿಯ ರೈತ ನಾಗಪ್ಪ ಶಂಕರ್ ಅವರು ಹೇಳಿದ್ದಾರೆ.
ಪರ್ಯಾಯವಾಗಿ ಕೊಯಮತ್ತೂರು ಮತ್ತು ನೀಲಗಿರಿಯಂತಹ ಪ್ರದೇಶಗಳಿಂದ ಹಣ್ಣುಗಳು ಪೂರೈಕೆಯಾಗುತ್ತಿವೆ. ಆದರೆ, ಅವುಗಳ ಲಭ್ಯತೆ ಸೀಮಿತವಾಗಿದೆ, ವರ್ಷದ ಆರಂಭದಲ್ಲಿ ಹೂವುಗಳು ಸರಿಯಾಗಿ ಬಾರದ ಕಾರಣ ಮತ್ತು ಇತ್ತೀಚಿನ ಮಳೆಯು ಸಾರಿಗೆಯ ಮೇಲೆ ಪರಿಣಾಮ ಬೀರಿದ್ದರಿಂದ ಈ ಋತುವಿನಲ್ಲಿ ಈ ಪ್ರದೇಶಗಳಲ್ಲಿ ಉತ್ಪಾದನೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಕೇರಳದಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇಲ್ಲ, ಆದರೆ, ವಾರವಿಡೀ ಪೂರೈಕೆಯಲ್ಲಿನ ಕೊರತೆ ಮುಂದುವರಿಯುವ ನಿರೀಕ್ಷೆಯಿದೆ. ಕೊಯ್ಲು ಪುನರಾರಂಭವಾಗುವವರೆಗೆ ಮತ್ತು ಕೇರಳದಿಂದ ಉತ್ಪನ್ನಗಳ ನಿಯಮಿತ ಸಾಗಣೆ ಪುನರಾರಂಭವಾಗುವವರೆಗೆ ಬೆಲೆಗಳು ಹೆಚ್ಚಳವಾಗಿಯೇ ಇರುವ ಸಾಧ್ಯತೆಯಿದೆ ಎಂದು ಮತ್ತೊಬ್ಬ ವ್ಯಾಪಾರಿ ತಿಳಿಸಿದ್ದಾರೆ.