ಬೆಂಗಳೂರು: ವಿರೋಧ ಪಕ್ಷಗಳ ನಾಯಕರ ವಿಶ್ವಾಸಕ್ಕೆ ಪಡೆದ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವರದಿಯನ್ನು ಸಚಿಚವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕುರಿತು ಸೋಮುಾರ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪಾಲಿಕೆಗಳನ್ನು ಹೇಗೆ ವಿಂಗಡಿಸಬೇಕು ಎಂಬುದರ ಬಗ್ಗೆ ಸಮಿತಿಯವರು ಅಂತಿಮ ವರದಿ ನೀಡಿದ್ದಾರೆ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ಅವರನ್ನು ವಿಶ್ವಾಸಕ್ಕೆ ಪಡೆಯಬೇಕು ಎಂದು ಸಮಿತಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಇದಾದ ಬಳಿಕ ಸಚಿವ ಸಂಪುಟ ಸಭೆಯ ಮುಂದೆ ವರದಿ ಬಗ್ಗೆ ಪ್ರಸ್ತಾಪ ಮಾಡುತ್ತೇನೆಂದು ಹೇಳಿದರು.
ಹಾಲಿ ಇರುವ ಪಾಲಿಕೆ ವ್ಯಾಪ್ತಿಯಲ್ಲೇ ಇದನ್ನು ಜಾರಿಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಣೆ ಮಾಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ, ಆದಷ್ಟು ಬೇಗ ಚುನಾವಣೆ ನಡೆಸಬೇಕಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಸಂಬಂಧ ಸಚಿವ ಪರಮೇಶ್ವರ್ ಅವರ ಭೇಟಿ ಕುರಿತು ಮಾತನಾಡಿ, ಎತ್ತಿನಹೊಳೆ ವಿಚಾರವಾಗಿ ಕೆಲವು ಸಮಸ್ಯೆ ಇತ್ತು. ಅವರ ತಾಲೂಕನ್ನು ಕೈಬಿಡಬೇಕು ಎಂಬ ಪ್ರಸ್ತಾವನೆ ಇತ್ತು. ಈ ಭಾಗದಲ್ಲಿ ನೀರು ನಿಲ್ಲಿಸಬೇಕಾಗಿದ್ದು, ಯಾವುದೇ ಹಳ್ಳಿ ಮುಳುಗದಂತೆ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಸ್ಥಳೀಯರೇ ಒಂದೆರಡು ಕೆರೆಗಳ ಬಗ್ಗೆ ಸಲಹೆ ನೀಡಿದ್ದು, ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದರು.
ನವದಹೆಲಿ ಭೇಟಿ ಕುರಿತು ಮಾತನಾಡಿ, ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವುದಾಗಿ ಮತ್ತು ತುಮಕೂರು ಮತ್ತು ಹಾಸನದಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಇದು ನಮಗೆ ದೇವಾಲಯವಿದ್ದಂತೆ. ನಾವು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗಲೂ ದೇವಾಲಯಕ್ಕೆ ಹೋಗಿ, ಪ್ರಾರ್ಥನೆ ಸಲ್ಲಿಸುತ್ತೇವೆಂದು ಹೇಳಿದರು.