ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಸೇರಿದಂತೆ ರಾಜ್ಯದ 11 ಮಹಾನಗರ ಪಾಲಿಕೆ ನೌಕರರು ಮಂಗಳವಾರ ಮುಷ್ಕರ ಆರಂಭಿಸಿದರು.
ಈ ಮಧ್ಯೆ ಬಿಬಿಎಂಪಿ ನೌಕರರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದು, ಉಳಿದ 10 ಮಹಾನಗರ ಪಾಲಿಕೆಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಅಲ್ಲಿನ ನಾಗರಿಕ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ ಎಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎ ಅಮೃತ್ ರಾಜ್ ತಿಳಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರಿನಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಯಲ್ಲಿನ ಲೋಪದೋಷಗಳಿಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕಂದಾಯ ಅಧಿಕಾರಿಗಳನ್ನು ಮರುನೇಮಕಗೊಳಿಸುವುದು ಪ್ರಮುಖ ಬೇಡಿಕೆಯಾಗಿದೆ. ಈ ಸಮಸ್ಯೆಯನ್ನು ಪರಿಶೀಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೌಕರರಿಗೆ ಭರವಸೆ ನೀಡಿದ್ದಾರೆ.
ಸಿಬ್ಬಂದಿಯ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಅವರು ತಿಳಿಸಿರುವುದಾಗಿ ರಾಜ್ ಹೇಳಿದರು. ತುಮಕೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ಇತರೆ ಮಹಾನಗರ ಪಾಲಿಕೆಗಳ ನೌಕರರು ವಿವಿಧ ಸೇವಾ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಏಳನೆ ವೇತನ ಆಯೋಗದ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ವಿಸ್ತರಿಸಿ, ಅನುದಾನ ಬಿಡುಗಡೆ, ವೃಂದ ಮತ್ತು ನೇಮಕಾತಿ ನಿಯಾಮವಳಿಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸುವುದು, ಪಾಲಿಕೆ ನೌಕರರಿಗೂ ಕೆಜಿಐಡಿ, ಜಿಪಿಎಫ್ ಸವಲತ್ತು ವಿಸ್ತರಣೆ ಮಾಡುವುದು , ಆರೋಗ್ಯ ಸೌಲಭ್ಯಗಳಾದ ಜ್ಯೋತಿ/ ಆರೋಗ್ಯ ಸಂಜೀವಿನಿ ಜಾರಿ, ಪಾಲಿಕೆ ಅಧಿಕಾರಿ,ನೌಕರರಿಗೂ ಪ್ರತಿವರ್ಷ ಕ್ರೀಡಾಕೂಟ ಆಯೋಜನೆ, ವಿವಿಧ ವೃಂದಗಳ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕೆಂದು ಪ್ರಮುಖ ಬೇಡಿಕೆಗಳಾಗಿವೆ.
ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಇಲಾಖೆಗೆ ಅರಿವಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ ಪ್ರತಿಭಟನಾನಿರತ ನೌಕರರಿಗೆ ಭರವಸೆ ನೀಡಿದ್ದಾರೆ.