ಬೆಂಗಳೂರು: ಸಾರ್ವಜನಿಕ ಸೇವೆಗಾಗಿ ಟಾಟಾ ಮೋಟರ್ಸ್ ಲಿಮಿಟೆಡ್ ನ 148 ಹವಾನಿಯಂತ್ರಣ ರಹಿತ ವಿದ್ಯುತ್ ಚಾಲಿತ ಬಸ್ಸುಗಳು ಹಾಗೂ ವೇಗದೂತ ಸೇವೆಗಳು ಮತ್ತು ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗಗಳನ್ನು BMTC ಶುಕ್ರವಾರ ಘೋಷಿಸಿದೆ.
ಮೊದಲ ಹಂತದಲ್ಲಿ 10 ನಾನ್ ಎಸಿ ವಿದ್ಯುತ್ ಚಾಲಿತ ಬಸ್ ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು.
ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಮತ್ತು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಮಾಲಿನ್ಯ ಎದುರಿಸಲು ಬಿಎಂಟಿಸಿ ಮಹತ್ವದ ಹೆಜ್ಜೆ ಇಟ್ಟಿದೆ. ಸದ್ಯಕ್ಕೆ ನಗರದ ವಿವಿಧ ಮಾರ್ಗಗಳಲ್ಲಿ ಒಟ್ಟು 1,436 ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಎಂಟಿಸಿ ಹೇಳಿದೆ.
TML (ಟಾಟಾ ಮೋಟಾರ್ಸ್ ಲಿಮಿಟೆಡ್) ಸ್ಮಾರ್ಟ್ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್‌ನಿಂದ ಪೂರೈಕೆ ಮಾಡಲಾದ ಹೆಚ್ಚುವರಿ 148 ಹೊಸ ನಾನ್-ಎಸಿ ಎಲೆಕ್ಟ್ರಿಕ್ ಬಸ್ಸುಗಳು ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (GCC) ಮಾದರಿಯಲ್ಲಿ 12 ವರ್ಷಗಳ ಒಪ್ಪಂದದ ಅವಧಿಗೆ ರೂ. 41 ದರದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಪ್ರತಿ ಬಸ್‌ಗೆ ವಿದ್ಯುತ್ ಶುಲ್ಕಸೇರಿದಂತೆ ಪ್ರತಿ ಕಿ.ಮೀಗೆ ರೂ. 1 ಇರುತ್ತದೆ. ನಗರ ಮತ್ತು ಭೂ ಸಾರಿಗೆ ನಿರ್ದೇಶನಾಲಯ (DULT) ಮತ್ತು ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ (NCAP) ಯೋಜನೆಯಡಿಯಲ್ಲಿ ಪ್ರತಿ ಬಸ್‌ಗೆ ರೂ. 39.08 ಲಕ್ಷ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು BMTC ಹೇಳಿಕೆಯಲ್ಲಿ ತಿಳಿಸಿದೆ.
ಈ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯಿಂದ ವಾತಾವರಣಕ್ಕೆ ಸರಿಸುಮಾರು 2.07 ಲಕ್ಷ ಕಿಲೋಗ್ರಾಂಗಳಷ್ಟು ಕಾರ್ಬನ್ ಡೈಆಕ್ಸೈಡ್ (CO2) ಹೊರಸೂಸುವಿಕೆ ತಡೆಯುವಲ್ಲಿ ಪ್ರಮುಖವಾಗಿದೆ ಮತ್ತು ಪ್ರತಿದಿನ ಸುಮಾರು 77,000 ಲೀಟರ್ ಡೀಸೆಲ್ ಉಳಿಸುವಲ್ಲಿ ಪ್ರಮುಖ ಕೊಡುಗೆ ನೀಡಿದೆ. ಇದರಿಂದ ನಗರದ ಹಸಿರು ಸಾರಿಗೆ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಬಿಎಂಟಿಸಿ ಹೇಳಿದೆ.