ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ತವರು ಮೈಸೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಆಟೋದಲ್ಲಿ ತೆರಳುತ್ತಿದ್ದ ಮಹಿಳೆಯರ ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ಮೈಸೂರಿನ ಹೃದಯಭಾಗದ ರಾಮಾನುಜ ರಸ್ತೆಯ 12ನೇ ಕ್ರಾಸ್ ಬಳಿ ಆಟೋದಲ್ಲಿ ಸಾಗುತ್ತಿದ್ದ ನಾಲ್ವರು ವ್ಯಕ್ತಿಗಳ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಕ್ರೂರ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಹಲ್ಲೆಗೊಳಗಾದವನ್ನು ರಾಜನ್ (ರಾಜಣ್ಣ) (38), ಅವರ ಪತ್ನಿ ಕುಮುದ, ವಿಶಾಲಾಕ್ಷಿ ಮತ್ತು ರೇಣುಕಮ್ಮ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾಜನ್ ಮೇಲೆ ಒಂದು ವರ್ಷದ ಹಿಂದೆ ಪೋಕ್ಸೋ ಪ್ರಕರಣವೊಂದು ದಾಖಲಾಗಿತ್ತು. ಗುರುವಾರ ಅವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಆಟೋದಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅವರನ್ನು ರಾಮಾನುಜ ರಸ್ತೆಯಲ್ಲಿ ಅಡ್ಡಗಟ್ಟಿ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದವರನ್ನು ರಾಮು ಆತನ ಪತ್ನಿ ಸೌಮ್ಯಾ, ಅಬ್ಬಯ್ಯ ಹಾಗೂ ಪ್ರಸಾದ್ ಎಂದು ಗುರುತಿಸಲಾಗಿದ್ದು, ಈ ನಾಲ್ವರ ತಂಡ, ಮಚ್ಚು ಮತ್ತು ಲಾಂಗ್ ಉಪಯೋಗಿಸಿ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಹಲ್ಲೆಯ ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ದಾಳಿಯು ಸಾರ್ವಜನಿಕ ರಸ್ತೆಯಲ್ಲೇ ನಡೆದಿದ್ದು, ದಾಳಿಕಾರರು ಮಾರಕಾಸ್ತ್ರಗಳನ್ನು ಹಿಡಿದು ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಘಟನೆಯ ಸಂಬಂಧ ಕೆಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ನಡೆಸುತ್ತಿದ್ದಾರೆ.
ಪ್ರತೀಕಾರದ ದಾಳಿ
ಇನ್ನು ಈ ಹಲ್ಲೆಯ ಹಿಂದೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದ ಪ್ರತೀಕಾರ ಕಾರಣವೇ ಎನ್ನುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳದ ಸಾಕ್ಷ್ಯಾಧಾರಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಬೃಹತ್ ಜಾಲ ಬೀಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲ್ಲೆಗೊಳಗಾಗಿರುವ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆ.ಆರ್. ನಗರ ಉಪ ವಿಭಾಗದ ಎಸಿಪಿ ರಮೇಶ್ ಕುಮಾರ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಹಲ್ಲೆಗೊಳಗಾದ ರಾಜಣ್ಣ ವಿದ್ಯಾರಣ್ಯಪುರಂ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ತನ್ನ ಸ್ನೇಹಿತನ ಅಪ್ರಾಪ್ತ ಮಗಳನ್ನು ಪ್ರೀತಿಸಿ, ಕರೆದುಕೊಂಡು ಹೋಗಿದ್ದ ಸಂಬಂಧ 2024ರಲ್ಲಿ ಆತನ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಗುರುವಾರ(ಜು.10) ನ್ಯಾಯಾಲಯದಲ್ಲಿ ಈ ಪ್ರಕರಣದ ಸಂಬಂಧ ವಿಚಾರಣೆ ನಡೆದಿದ್ದು, ರಾಜಣ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದ. ಈ ಮಧ್ಯೆ ಆತನ ಸ್ನೇಹಿತನ ಅಪ್ರಾಪ್ತ ಮಗಳು ಗುರುವಾರ ನಾಪತ್ತೆಯಾಗಿದ್ದಾಳೆ ಎಂದು ವಿದ್ಯಾರಣ್ಯ ಪುರಂ ಠಾಣೆಯಲ್ಲಿ ಆಕೆಯ ಪೋಷಕರು ರಾಜಣ್ಣನ ವಿರುದ್ಧ ಸಂಶಯ ವ್ಯಕ್ತಪಡಿಸಿ ಪ್ರಕರಣ ದಾಖಲು ಮಾಡಿದ್ದರು. ರಾತ್ರಿ ವೇಳೆಗೆ ಪೊಲೀಸರು ಅಪ್ರಾಪ್ತೆಯನ್ನು ಪತ್ತೆ ಹಚ್ಚಿ, ಠಾಣೆಗೆ ಕರೆತಂದು ಪ್ರಕರಣವನ್ನು ಮುಕ್ತಾಯಗೊಳಿಸಿ, ಆಕೆಯನ್ನು ಪೋಷಕರೊಂದಿಗೆ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.