ಬೆಂಗಳೂರು: ಬೆಂಗಳೂರಿನ ಭಾರತಿನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನಿಗೆ ರೌಡಿಸಂ ಮಾತ್ರವಲ್ಲದೇ ಕನ್ನಡ ಚಲನಚಿತ್ರ ರಂಗದ ಕೆಲ ಪ್ರಮುಖ ಕಲಾವಿದರು ಹಾಗೂ ನಿರ್ಮಾಪಕರ ಜತೆ ಕೂಡ ನಂಟಿತ್ತು ಎನ್ನಲಾಗಿದೆ.
ಇದಕ್ಕೆ ಇಂಬು ನೀಡುವಂತೆ ಆತ ನಟಿ ರಚಿತಾರಾಮ್ ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟ ವಿ ರವಿಚಂದ್ರನ್ ಜೊತೆ ತೆಗೆದುಕೊಂಡಿರುವ ಫೋಟೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಆರೋಪಿ ಜಗ್ಗ ನಟಿ ರಚಿತಾ ರಾಮ್ ಗೆ ರೇಷ್ಮೆಸೀರೆ, ಚಿನ್ನಾಭರಣ ಉಡುಗೊರೆ ಕೊಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿದೆ.
ಫೋಟೋಗಳ ಅಸಲೀಯತ್ತೇನು?
ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಸೋದರ ಸಂಬಂಧಿ ಹಾಗೂ ಚಲನಚಿತ್ರ ನಿರ್ಮಾಪಕ ಅನಿಲ್ ಮೂಲಕ ಸಿನಿಮಾ ರಂಗದ ಕೆಲವರು ಜಗ್ಗನಿಗೆ ಪರಿಚಯವಾಗಿದ್ದರು. ಈ ಸ್ನೇಹ ಹಿನ್ನೆಲೆಯಲ್ಲಿ ಕೆಲವು ಕಲಾವಿದರನ್ನು ಹುಟ್ಟುಹಬ್ಬ ಸೇರಿದಂತೆ ಕೆಲ ವಿಶೇಷ ದಿನಗಳಲ್ಲಿ ಭೇಟಿಯಾಗಿ ಜಗ್ಗ ದುಬಾರಿ ಬೆಲೆಯ ಉಡುಗೊರೆ ಸಹ ಕೊಟ್ಟಿದ್ದ ಎನ್ನಲಾಗಿದೆ.
ಅಂತೆಯೇ ಚಲನಚಿತ್ರ ರಂಗದ ಖ್ಯಾತ ನಟಿ ರಚಿತಾ ರಾಮ್ ಅವರಿಗೆ ರೇಷ್ಮೆ ಸೀರೆ ಹಾಗೂ ಚಿನ್ನಾಭರಣವನ್ನು ಆತ ಉಡುಗೊರೆ ಕೊಟ್ಟಿದ್ದ ಎಂದು ತಿಳಿದು ಬಂದಿದೆ. ಹಿರಿಯ ನಟ ಕ್ರೇಜಿಸ್ಟಾರ್ ರವಿ ಚಂದ್ರನ್ ಅವರ ಸಮ್ಮುಖದಲ್ಲಿ ರಚಿತಾ ರಾಮ್ ಅವರಿಗೆ ದುಬಾರಿ ಉಡುಗೊರೆ ಕೊಟ್ಟು ಜಗ್ಗ ತೆಗೆಸಿಕೊಂಡಿದ್ದ ಎನ್ನಲಾದ ಫೋಟೋಗಳು ಸೋಮವಾರ ಬಹಿರಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಲ್ಲದೆ ಕೆಲ ಸಿನಿಮಾಗಳಿಗೆ ಪರೋಕ್ಷವಾಗಿ ಆತ ಬಂಡವಾಳ ಸಹ ತೊಡಗಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ಹೇಳಿವೆ. ಕೊಲೆ ಪ್ರಕರಣದ ತನಿಖೆಗೂ ಚಲನಚಿತ್ರ ಕಲಾವಿದರ ಜತೆ ಜಗ್ಗನ ಸ್ನೇಹಕ್ಕೂ ಸದ್ಯ ಯಾವುದೇ ಸಂಬಂಧವಿರುವಂತೆ ಕಂಡು ಬಂದಿಲ್ಲ.
ತಾನು ಪ್ರಭಾವಿ ಎಂದು ಬಿಂಬಿಸಿಕೊಳ್ಳಲು ನಟ-ನಟಿಯರ ಜತೆ ಆತ ಫೋಟೋ ತೆಗೆಸಿಕೊಂಡಿರಬಹುದು. ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಬಂಧನದ ಬಳಿಕ ಸತ್ಯ ಗೊತ್ತಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೌಡಿ ಕೊಲೆ ಪ್ರಕರಣದ ಬಳಿಕ ಹೊರರಾಜ್ಯಗಳಲ್ಲಿ ಜಗ್ಗ ತಲೆಮರೆಸಿಕೊಂಡಿದ್ದಾನೆ.
ಆರೋಪಿ ಜೊತೆ ಕುಂಭಮೇಳಕ್ಕೆ ತೆರಳಿದ್ದ ಶಾಸಕರು
ಇನ್ನು ಈ ಹತ್ಯೆ ಕೃತ್ಯದ ಬಳಿಕ ಆತನೊಂದಿಗೆ ಒಡನಾಟ ಹೊಂದಿದ್ದ ಎಂಬ ಆರೋಪದ ಮೇರೆಗೆ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜುಗೆ ತನಿಖೆ ಬಿಸಿ ತಟ್ಟಿದೆ. ಈಗಾಗಲೇ ಅಧಿಕಾರಿಗಳು ಶಾಸಕ ಬೈರತಿ ಬಸವರಾಜು ಅವರನ್ನು ಒಂದು ಹಂತದ ವಿಚಾರಣೆಗೂ ಒಳಪಡಿಸಿದ್ದಾರೆ. ಈ ಹಿಂದೆ ಕುಂಭಮೇಳಕ್ಕೆ ಜಗ್ಗನ ಜತೆ ಶಾಸಕರು ತೆರಳಿದ್ದರು. ಮಾತುಗಳಿಗೆ ಸಾಕ್ಷಿ ಎನ್ನುವಂತೆ ಫೋಟೋಗಳು ಬಹಿರಂಗವಾಗಿದ್ದವು. ಈಗ ಚಲನಚಿತ್ರ ರಂಗದ ನಂಟಿನ ಬಗ್ಗೆ ನಟ-ನಟಿಯರ ಜತೆ ಜಗ್ಗನ ಫೋಟೋಗಳು ಹೊರ ಬಂದಿವೆ.
ಜಗ್ಗನ ಮನೆ ಮೇಲೆ ದಾಳಿ, ಹಲವು ದಾಖಲೆಗಳ ಜಪ್ತಿ
ಇದೇ ವೇಳೆ ಬಿಕ್ಲು ಶಿವ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ತಮ್ಮ ತನಿಖೆ ತೀವ್ರಗೊಳಿಸಿದ್ದು, ಈ ವೇಳೆ ಆರೋಪಿ ಜಗ್ಗನ ಮನೆ ಮೇಲೆ ದಾಳಿ ಮಾಡಿ ಹಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಹತ್ಯೆ ಬಳಿಕ ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಜಗ್ಗನಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಹೆಣ್ಣೂರಿನಲ್ಲಿರುವ ಜಗ್ಗನ ಮನೆ ಮೇಲೆ ಪೊಲೀಸರ ತಂಡವು ದಾಳಿ ಪರಿಶೀಲಿಸಿವೆ. ಈ ವೇಳೆ ಕೆಲ ಭೂ ದಾಖಲೆಗಳು, ಗನ್ ಪರವಾನಗಿ ಹಾಗೂ ಕೆಲ ಚೆಕ್ ಗಳು ಪತ್ತೆಯಾಗಿವೆ ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.