ಬೆಂಗಳೂರು: ದಕ್ಷಿಣ ಅಮೆರಿಕದ ಗಯಾನಾದಲ್ಲಿ ಅನಾರೋಗ್ಯದಿಂದ ಪತಿಯನ್ನು ಕಳೆದುಕೊಂಡ ಪತ್ನಿಯ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ. ಮೃತನ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ರೂ. 3.6 ಲಕ್ಷ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
ಮೃತಪಟ್ಟ ಪಿ.ಬಿ.ಗಿರೀಶ್ ಕೊಡಗಿನ ಮದೆನಾಡು ಗ್ರಾಮದ ನಿವಾಸಿ. ಅವರು ದಕ್ಷಿಣ ಅಮೆರಿಕದ ಗಯಾನಾದಲ್ಲಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಜುಲೈ 3 ರಿಂದ ವೈದ್ಯಕೀಯ ನೆರವು ಪಡೆಯುತ್ತಿದ್ದರು. ಜುಲೈ 14 ರಂದು ಗಯಾನಾದ ಆಸ್ಪತ್ರೆಯೊಂದರಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎನ್ನಲಾಗಿದೆ.
ಆದರೆ, ಗಿರೀಶ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸುಮಾರು ರೂ. 12 ಲಕ್ಷ ವೆಚ್ಚವಾಗುತ್ತದೆ ಎಂಬುದು ಕುಟುಂಬಕ್ಕೆ ತಿಳಿದಿದೆ. ಇದರ ಬೆನ್ನಲ್ಲೇ ಗಿರೀಶ್ ಪತ್ನಿ ಜಾನಕಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಮೃತದೇಹವನ್ನು ಭಾರತಕ್ಕೆ ತರಲು ರಾಜ್ಯ ಸರ್ಕಾರದಿಂದ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಮೃತನ ಸಂಬಂಧಿಕರು ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ ಅವರ ಬಳಿಯೂ ಸಹಾಯ ಕೋರಿ ಮನವಿ ಮಾಡಿದ್ದರು.
ಇದಾದ ನಂತರ ರಾಜ್ಯ ಶಿಷ್ಟಾಚಾರ, ವಿದೇಶಿ ಸೆಲ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು, ಗಿರೀಶ್ ಅವರ ಪಾರ್ಥಿವ ಶರೀರವನ್ನು ಅವರ ತಾಯ್ನಾಡಿಗೆ ತರಲು ರೂ. 3.6 ಲಕ್ಷ ನೀಡುವಂತೆ ನವದೆಹಲಿಯ ಕರ್ನಾಟಕ ಭವನದ ಆಯುಕ್ತರಿಗೆ ಆದೇಶಿಸಿದ್ದಾರೆ. ಉಳಿದ ಮೊತ್ತವನ್ನು ಗಿರೀಶ್ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸಿದ ಗಯಾನಾದ ಶೆರಿಫ್ ಜನರಲ್ ಆಸ್ಪತ್ರೆ ಭರಿಸಲಿದೆ.
ಮೃತದೇಹವನ್ನು ಶೀಘ್ರದಲ್ಲಿಯೇ ಭಾರತಕ್ಕೆ ತರಲು ಗಯಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಕ್ರಮ ಕೈಗೊಳ್ಳುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.