ಸಂಗ್ರಹ ಚಿತ್ರ 
ರಾಜ್ಯ

ದಾವಣಗೆರೆ: ಕೆರೆ ಅಂಗಳದಲ್ಲಿ ಬೆಳೆದ ಮೆಕ್ಕೆ, ಟೊಮೆಟೋ ಬೆಳೆ ತೆರವು; ಅಧಿಕಾರಿಗಳ ಹಠಾತ್ ಕ್ರಮಕ್ಕೆ ರೈತರು ಕಂಗಾಲು

ತಾಲೂಕಿನ ನರಸೀಪುರ ಗ್ರಾಮ ಸಮೀಪದ ಹೊನ್ನೂರು ಕೆರೆಯಲ್ಲಿ ಹನಿ ನೀರೂ ಇಲ್ಲದೆ ಕೆರೆ ಖಾಲಿಯಾಗಿತ್ತು. ಈ ಕೆರೆ ಪ್ರದೇಶದಲ್ಲಿ ಗ್ರಾಮದ ಬಡವರು ಮೆಕ್ಕೆಜೋಳ, ಟೊಮೆಟೋ ಬೆಳೆಗಳನ್ನು ಬೆಳೆದು ಜೀವನಕ್ಕೆ ದಾರಿ ಮಾಡಿಕೊಂಡಿದ್ದರು.

ದಾವಣಗೆರೆ: ಹೊನ್ನೂರು ಕೆರೆಯಲ್ಲಿ ಕಳೆದ ಐದಾರು ದಶಕಗಳಿಂದ ಮೆಕ್ಕೆಜೋಳ, ಟೊಮೆಟೋ ಬೆಳೆಗಳ ಬೆಳೆದು ಸಣ್ಣದಾಗಿ ಬದುಕು ಕಟ್ಟಿಕೊಂಡಿದ್ದ ಬಡ ರೈತರಿಗೆ ಸಣ್ಣ ನೀರಾವರಿ ಇಲಾಖೆ ಇದ್ದಕ್ಕಿದ್ದಂತೆ ಶಾಕ್ ನೀಡಿದೆ.

ರೈತರು ಬೆಳೆದಿದ್ದ ಬೆಳೆಗಳನ್ನು ಸಣ್ಣ ನೀರಾವರಿ ಇಲಾಖೆ ತೆರವುಗೊಳಿಸಿದ್ದು, ಇದರಿಂದ ನೊಂದ ಬಡರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೂರ್ವ ಎಚ್ಚರಿಕೆಗಳು ಮತ್ತು ಜಾಗೃತಿ ಅಭಿಯಾನಗಳ ಹೊರತಾಗಿಯೂ, ರೈತರು ಅತಿಕ್ರಮಣಗೊಂಡ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯುವುದನ್ನು ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ರೈತರು ತಮಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳ ದಿಢೀರ್ ಕ್ರಮದಿಂದಾಗಿ 50,000 ರೂ.ಗಳವರೆಗೆ ನಷ್ಟವಾಗಿದ್ದು, ಕೆಲವರಿಗೆ 50,000 ರೂ.ಗಳವರೆಗೆ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ತಾಲೂಕಿನ ನರಸೀಪುರ ಗ್ರಾಮ ಸಮೀಪದ ಹೊನ್ನೂರು ಕೆರೆಯಲ್ಲಿ ಹನಿ ನೀರೂ ಇಲ್ಲದೆ ಕೆರೆ ಖಾಲಿಯಾಗಿತ್ತು. ಈ ಕೆರೆ ಪ್ರದೇಶದಲ್ಲಿ ಗ್ರಾಮದ ಬಡವರು ಮೆಕ್ಕೆಜೋಳ, ಟೊಮೆಟೋ ಬೆಳೆಗಳನ್ನು ಬೆಳೆದು ಜೀವನಕ್ಕೆ ದಾರಿ ಮಾಡಿಕೊಂಡಿದ್ದರು.

ಸಾಲ ಮಾಡಿ ಕೆರೆ ಅಂಗಳದ ಅರ್ಧದಷ್ಟು ಜಾಗದಲ್ಲಿ ಮೆಕ್ಕೆಜೋಳ, ಟೊಮೆಟೋ ಬೆಳೆದಿದ್ದರು. ಇದರ ವಿರುದ್ಧ ಅನಾಮಧೇಯ ಕೈಗಳು ಸಣ್ಣ ನೀರಾವರಿ ಇಲಾಖೆಗೆ ಕರೆ ಮಾಡಿ, ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಕಾರಣಕ್ಕೆ ಇಲಾಖೆ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಧಾವಿಸಿ ಬೆಳೆಗಳನ್ನು ಟ್ರ್ಯಾಕ್ಟರ್ ಬಳಸಿ ತೆರವುಗೊಳಿಸಿದ್ದಾರೆಂದು ತಿಳಿದುಬಂದಿದೆ.

ಐದಾರು ದಶಕಗಳಿಂದ ಕೆರೆ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದೇವೆ. 15 ದಿನಗಳ ಹಿಂದೆ ಬಂದ ಅಧಿಕಾರಿಗಳು ಕೆರೆ ಜಾಗ ಎಲ್ಲಿವರೆಗೆ ಬರುತ್ತದೆಯೋ ಅಲ್ಲಿಯವರೆಗೂ ಬೋರ್ಡ್ ಅಳವಡಿಸಿ ಹೋಗಿದ್ದರು. ಈ ವೇಳೆ ಒಂದು ಬೆಳೆ ಬೆಳೆದುಕೊಳ್ಳಿ. ಇನ್ನು ಮುಂದೆ ಕೆರೆಯಂಗಳದಲ್ಲಿ ಬೆಳೆ ಬೆಳೆಯಬಾರದು ಎಂದು ಹೇಳಿದ್ದರು.

ಆದರೆ, ಇದೀಗ ಇದ್ದಕ್ಕಿದ್ದಂತೆ ಬಂದು ಏಕಾಏಕಿ ಟ್ರ್ಯಾಕ್ಟರ್ ಬಳಸಿ ಬೆಳೆಗಳನ್ನು ಕಿತ್ತೆಸೆದಿದ್ದಾರೆ. ಇದೀಗನಮ್ಮಂತರ ಬಡವರು ಎಲ್ಲಿಗೆ ಹೋಗಬೇಕು. ಬೆಳೆ ಕೈಗೆ ಬಂದ ವೇಳೆ ನಾಶಪಡಿಸಿರುವುದು ಕೈಗೆ ಬಂದ ಮಗನ ಸಾವು ಎದುರಿಗೆ ನೋಡಿದಷ್ಟು ಸಂಕಟವಾಗುತ್ತಿದೆ ಎಂದು ರೈತರು ಕಣ್ಣೀರಿಟ್ಟಿದ್ದಾರೆ.

ನಾವು ಬೀಜಗಳು ಮತ್ತು ರಸಗೊಬ್ಬರಗಳಿಗೆ ಸುಮಾರು 50,000 ರೂ. ಖರ್ಚು ಮಾಡಿದ್ದೇವೆ, ಆದರೆ, ಇದೀಗ ಎಲ್ಲವೂ ವ್ಯರ್ಥವಾಗಿದೆ. ಈ ವರ್ಷ ಬೆಳೆ ಬೆಳೆದು ತಿನ್ನಲು ಅಧಿಕಾರಿಗಳು ನಮಗೆ ಹೇಳಿದರು. ಈಗ ತೆರವು ಮಾಡಿದ್ದಾರೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ನಮಗೆ ಮೊದಲೇ ತಿಳಿಸಿದ್ದರೆ, ನಾವು ಹಣ ಖರ್ಚು ಮಾಡಿ ಬೆಳೆಗಳನ್ನು ನೆಡುತ್ತಿರಲಿಲ್ಲ.

ಅಧಿಕಾರಿಗಳು ಇದ್ದಕ್ಕಿದ್ದಂತೆ ಬಂದು ನಮಗೆ ಹೇಳದೆ ಸುಮಾರು 25 ಎಕರೆ ಭೂಮಿಯನ್ನು ನಾಶಪಡಿಸಿದರು. ನಮಗೆ ಒಂದೂವರೆ ತಿಂಗಳು ಕಾಲಾವಕಾಶ ನೀಡಿದ್ದರೆ, ಅದು ಸಾಕಾಗುತ್ತಿತ್ತು; ಅಷ್ಟರೊಳಗೆ ನಾವು ಬೆಳೆಗಳನ್ನು ಕೊಯ್ಲು ಮಾಡಿರುತ್ತಿದ್ದೆವು ಎಂದು ರೈತ ನಾಗರಾಜ್ ಎಂಬುವವರು ಹೇಳಿದ್ದಾರೆ.

ಈ ನಡುವೆ ತಮ್ಮ ನಡೆಯನ್ನು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಕೆರೆ ಜಾಗ ರಕ್ಷಣೆ ದೃಷ್ಟಿಯಿಂದ ಮುಂಚೆಯೇ ರೈತರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ಜಾಗೃತಿಯನ್ನೂ ಕೂಡ ಮೂಡಿಸಿದ್ದೆವು. ಕೆರೆ ಜಾಗ ಒತ್ತುವರಿ ಮಾಡಿ, ಬೆಳೆ ಬೆಳೆಯದಂತೆ ಎಚ್ಚರಿಸಿದ್ದೆವು. ಆದರೂ, ಸರ್ಕಾರಿ ಕೆರೆ ಜಾಗ ಒತ್ತುವರಿ ಮಾಡಿದ್ದಾರೆ. ನೋಟಿಸ್ ಕೊಟ್ಟು ಡಂಗುರ ಕೂಡ ಸಹ ಸಾರಿ ಜಾಗೃತಿ ಮೂಡಿಸಿದ್ದೆವು. ಆದರೂ, ಇಲಾಖೆ ನೋಟಿಸ್'ಗೂ ಬೆಲೆ ಕೊಡದೆ ಬೆಳೆಗಳ ಬೆಳೆದಿದ್ದಾರೆ. ಇದೀಗ ಬೆಳೆ ತೆರವು ಮಾಡುವಂತೆ ಸರ್ಕಾರದಿಂದಲೇ ಆದೇಶ ಬಂದಿದೆ. ಹೀಗಾಗಿ ತೆರವು ಮಾಡಿದ್ದೇವೆ. ಸರ್ಕಾರಿ ಜಾಗ ಯಾರೇ ಒತ್ತುವರಿ ಮಾಡಿದ್ದರೂ ತೆರವು ಮಾಡಿಸುತ್ತೇವೆ. ಇದು ಸರ್ಕಾರದ ಆದೇಶವೆಂದು ಹೇಳಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಅವರು ಮಾತನಾಡಿ, ನಾವು ಈ ಹಿಂದೆ ಇಲ್ಲಿನ ರೈತರಿಗೆ ನೋಟಿಸ್ ನೀಡಿ, ಜಾಗೃತಿ ಮೂಡಿಸಿದ್ದೆವು, ಆದರೆ, ಅವರು ಭೂಮಿಯನ್ನು ಅತಿಕ್ರಮಣ ಮಾಡಿ ಬೆಳೆಗಳನ್ನು ಬೆಳೆಯುವುದನ್ನು ಮುಂದುರೆಸಿದ್ದರು. ನಾನು ನೀಡಿದ ನೋಟಿಸ್‌ಗಳಿಗೆ ಗಮನ ಕೊಡಲಿಲ್ಲ. ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ನಾವು ತೆರವುಗೊಳಿಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

12 ಸಾವಿರ ವರ್ಷಗಳಲ್ಲೇ ಮೊದಲು: ಹೈಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟ; ಭಾರತ ಸೇರಿ ಹಲವು ದೇಶಗಳ ವಿಮಾನಗಳ ಮಾರ್ಗ ಬದಲಾವಣೆ!

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಕಾಂಗ್ರೆಸ್‌ನಲ್ಲಿ ಅವರ ಶಾಸಕರನ್ನ ಅವರೇ ಖರೀದಿ ಮಾಡುತ್ತಿದ್ದಾರೆ; ಒಬ್ಬರಿಗೆ 100 ಕೋಟಿ ರೂ ಆಫರ್‌; ಕಾರು, ಫ್ಲ್ಯಾಟು ಗಿಫ್ಟು!

SCROLL FOR NEXT