ಬಿ.ವೈ. ವಿಜಯೇಂದ್ರ 
ರಾಜ್ಯ

ರೈತರಿಗೆ ನಕಲಿ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ: ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು- ಬಿಜೆಪಿ ಒತ್ತಾಯ

ನಕಲಿ ಬೀಜ ಪೂರೈಸುವ ಮೂಲಕ ಕೃಷಿ ಚಟುವಟಿಕೆ ನಿಷ್ಕ್ರಿಯಗೊಳಿಸುವ ವಿಷಕಾರಕ ಕೃತ್ಯದಲ್ಲಿ ತೊಡಗಿರುವ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳಬೇಕು.

ಬೆಂಗಳೂರು: ಈ ಬಾರಿ ಆಶಾದಾಯಕ ಮುಂಗಾರಿನ ಹಿನ್ನೆಲೆಯಲ್ಲಿ ಉತ್ತಮ ಬೆಳೆ ಬೆಳೆಯುವ ಉತ್ಸಾಹದಲ್ಲಿರುವ ರೈತರಿಗೆ ನಕಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ಒತ್ತಾಯಿಸಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ರೈತರಿಗೆ ನಕಲಿ ಬೀಜಗಳು ಮತ್ತು ರಸಗೊಬ್ಬರ ಪೂರೈಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಅನ್ನ ನೀಡುವ ರೈತರಿಗೆ ತೊಂದರೆ ಕೊಡುವ ಮತ್ತು ವ್ಯವಸ್ಥೆಯೊಳಗೆ ಶೋಷಣೆ ಮಾಡುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಲೇ ಇವೆ. ಈ ಬಾರಿ ಮುಂಗಾರು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿರುವ ಉತ್ಸಾಹಿ ರೈತ ಸಮುದಾಯಕ್ಕೆ ರಸಗೊಬ್ಬರ ಮತ್ತು ಬೀಜಗಳನ್ನು ಪೂರೈಸುವ ಕಂಪನಿಗಳು ನಕಲಿ ಬೀಜಗಳನ್ನು ನೀಡಿ ಕೃಷಿ ಚಟುವಟಿಕೆಗಳನ್ನು ಹಾಳು ಮಾಡುವ ಹೇಯ ಕೃತ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದರು.

ನಕಲಿ ಬೀಜ ಪೂರೈಸುವ ಮೂಲಕ ಕೃಷಿ ಚಟುವಟಿಕೆ ನಿಷ್ಕ್ರಿಯಗೊಳಿಸುವ ವಿಷಕಾರಕ ಕೃತ್ಯದಲ್ಲಿ ತೊಡಗಿರುವ ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಸಕಾಲದಲ್ಲಿ ರೈತಸಮೂಹಕ್ಕೆ ಗುಣಮಟ್ಟದ ಬಿತ್ತನೆ ಬೀಜ, ಅಗತ್ಯ ರಸಗೊಬ್ಬರಗಳು ದೊರಕಲು ಸಾಧ್ಯವಿರುವ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಪ್ರೋತ್ಸಾಹ ಯೋಜನೆಗಳ ಜತೆಗೇ ರೈತ ರಕ್ಷಣೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಬದುಕಿಗೆ ಕಿಂಚಿತ್ತೂ ತೊಂದರೆಯಾಗದಂತೆ ಬದ್ಧತೆಯ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಕೃಷಿ ಇಲಾಖೆಗೆ ಪೂರಕ ಶಕ್ತಿ ತುಂಬಲು ರೈತರನ್ನು ವಂಚಿಸುವ ಜಾಲಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಜಾಗೃತ ದಳವನ್ನು ರಚಿಸಬೇಕು. ಯಾವುದೇ ವಂಚಕ ಯತ್ನಗಳನ್ನು ಹಿಮ್ಮಟ್ಟಿಸಲು ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜರೂರಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ತನ್ನ ದುರಾಡಳಿತದಿಂದ ರಾಜ್ಯದ ವಿವಿಧೆಡೆ ಯೂರಿಯಾಕ್ಕೆ ಕೃತಕ ಅಭಾವ ಸೃಷ್ಟಿಸಿದ್ದು, ರೈತರಲ್ಲಿ ಆತಂಕ ಮೂಡಿಸಿದೆ ಎಂದು ಆರೋಪಿಸಿ ಬಿಜೆಪಿ ರೈತ ಘಟಕ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈ ಬಾರಿ ಮುಂಗಾರು ಒಂದು ತಿಂಗಳು ಮುಂಚಿತವಾಗಿ ಬಂದಾಗಲೇ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು, ವಿತರಣೆ ಬಗ್ಗೆ ಗಮನ ಹರಿಸಬೇಕಾಗಿದ್ದ ಕಾಂಗ್ರೆಸ್ ಸರ್ಕಾರ, ಬಣ ಬಡಿದಾಟ, ಕುರ್ಚಿ ಕಿತ್ತಾಟದ ಭರಾಟೆಯಲ್ಲಿ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ರೈತರು ಮಣ್ಣು ತಿನ್ನುವ ಪರಿಸ್ಥಿತಿ ತಂದಿಟ್ಟಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Mysuru Dasara: ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ; ಜಂಬೂ ಸವಾರಿಗೆ ಸಿಎಂ ಚಾಲನೆ

ಯದುವೀರ್ ಒಡೆಯರ್ ರಿಂದ ಬನ್ನಿ ಮರಕ್ಕೆ ಶಮಿ ಪೂಜೆ: ಅರಮನೆ ದಸರಾ ಮುಕ್ತಾಯ

HAL ಗೇ ಠಕ್ಕರ್, ಟಾಟಾ-Airbus ನಿಂದ ಕರ್ನಾಟಕದಲ್ಲಿ H125 ಹೆಲಿಕಾಪ್ಟರ್ ನಿರ್ಮಾಣ!

RSS @100: ಪ್ರಚಾರಕರಾಗಿ ಸಂಘ ಸೇರಿದ ಕೇರಳದ ಮಾಜಿ ಪೊಲೀಸ್ ಮುಖ್ಯಸ್ಥ Jacob Thomas

ಭಾರತದಲ್ಲಿ ಪ್ರತಿ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ: NCRB ವರದಿ

SCROLL FOR NEXT