ಗದಗ: ಗದಗದ ದಂತವೈದ್ಯ ಮತ್ತು ಪ್ರಕೃತಿ ಪ್ರೇಮಿಯೊಬ್ಬರು ತಮ್ಮ 10 ಎಕರೆ ಒಣ ಭೂಮಿಯನ್ನು ಮಿನಿ ಅರಣ್ಯವನ್ನಾಗಿ ಪರಿವರ್ತಿಸಿದ್ದಾರೆ, ಈ ಹಸಿರಾದ ಭೂಮು ಇಂದು ಅನೇಕ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.
ಡಾ. ಪ್ರದೀಪ್ ಎಸ್. ಉಗಲತ್ (43) ಅವರು, 2016 ರಲ್ಲಿ ಗದಗ ಜಿಲ್ಲೆಯ ಹುಯಿಲ್ಗೋಳ್ ಬಳಿಯ ಬಾಲಗನೂರು ಗ್ರಾಮದಲ್ಲಿರುವ ತಮ್ಮ ಅರೆ-ಬಂಜರು ಭೂಮಿಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಭೂಮಿಯನ್ನು ಮಿನಿ ಅರಣ್ಯವನ್ನಾಗಿ ಪರಿವರ್ತಿಸುವ ಕುರಿತು ಚಿಂತನೆ ನಡೆಸಿದ್ದರು.
ತಮ್ಮ ಈ ಚಿಂತನೆಯನ್ನು ಸ್ನೇಹಿತರೊಂದಿಗೂ ಹಂಚಿಕೊಂಡಿದ್ದರು. ಈ ವೇಳೆ ಅವರ ಸ್ನೇಹಿತರು ನೀರಿನ ಕೊರತೆಯಿದ್ದರೆ ಕಾಡು ಬೆಳೆಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದರಿಂದ ನಿರುತ್ಸಾಹಗೊಳ್ಳದ ಪ್ರದೀಪ್ ಅವರು, ಮೊದಲು ದನ ಮತ್ತು ಇತರೆ ಪ್ರಾಣಿಗಳು ತಮ್ಮ ಭೂಮಿಗೆ ಬಾರದಂತೆ ಮಾಡಲು ನೈಸರ್ಗಿತ ಬೇಲಿ ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಮುಳ್ಳಿನ ಗಿಡ ಪಾಪಸ್ ಕಳ್ಳಿ ಗಿಡಗಳನ್ನು ಸುತ್ತಲೂ ನೆಟ್ಟಿದ್ದಾರೆ. ನಂತರ ಬೆಳೆ ಬೆಳೆಯರು ಕಡಿಮೆ ನೀರಿನ ಅಗತ್ಯವಿರುವ ಶ್ರೀಗಂಧ, ಸುಬಾಬುಲ್, ಬೇವು, ತೇಗ ಮತ್ತು ಮಹೋಗಾನಿ ಸೇರಿದಂತೆ 100 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ತಂದು ಮಳೆಗಾಲದ ಸಮಯದಲ್ಲಿ ನೆಟ್ಟಿದ್ದಾರೆ.
ನಂತರ ಮಳೆನೀರನ್ನು ಕೊಯ್ಲು ಮಾಡಲು ತಮ್ಮ ಜಮೀನಿನಾದ್ಯಂತ ಕಂದಕಗಳನ್ನು ತೋಡಿದ್ದಾರೆ. ಇದು ಸಸಿಗಳು ವೇಗವಾಗಿ ಬೆಳೆಯಲು ಸಹಾಯ ಮಾಡಿದೆ. ಅವು ಮಣ್ಣಿನ ಫಲವತ್ತತೆ ಮತ್ತು ಸಸ್ಯಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರುತ್ತವೆ ಎಂದು ಭಾವಿಸಿದ್ದ ಕಾರಣ, ಸಸಿಗಳು ಬೆಳೆಯಲು ಗೊಬ್ಬರಗಳನ್ನು ಬಳಕೆ ಮಾಡಿಲ್ಲ.
ಪಕ್ಷಿಗಳು ಮತ್ತು ಸಣ್ಣ ಸಸ್ತನಿಗಳನ್ನು ಆಕರ್ಷಿಸಲು, ಸೀತಾಫಲ, ಪೇರಲ, ಹಲಸು, ನೆಲ್ಲಿಕಾಯಿ ಮತ್ತು ಹುಣಸೆ ಮುಂತಾದ ಹಣ್ಣುಗಳನ್ನು ಹೊಂದಿರುವ ಸಸಿಗಳನ್ನು ನೆಟ್ಟಿದ್ದಾರೆ.
ನಾಲ್ಕು ವರ್ಷಗಳಲ್ಲಿ ಪಕ್ಷಿಗಳು ಮರಗಳ ಮೇಲೆ ಗೂಡುಕಟ್ಟಲು ಪ್ರಾರಂಭಿಸಿದವು. ಅಳಿಲುಗಳು, ಹಲ್ಲಿಗಳು, ಜೇಡಗಳು ಮತ್ತು ಇತರ ಸಣ್ಣ ಪ್ರಾಣಿ ಪ್ರಭೇದಗಳು ಈಗ ಈ ಕಾಡಿನ ಭಾಗವಾಗಿವೆ.
ಬಾಲ್ಯದಿಂದಲೂ ಪ್ರಕೃತಿ ಮೇಲೆ ಅತ್ಯಂತ ಪ್ರೀತಿ. ಬಾಲ್ಯದಿಂದಲೂ ಪ್ರಕೃತಿಗೆ ಹತ್ತಿರವಾಗಿದ್ದೇನೆ. ಶಾಲಾ ದಿನಗಳಲ್ಲಿ ಸಸಿಗಳನ್ನು ನೆಡುವುದು ಮತ್ತು ಅವುಗಳನ್ನು ನೋಡಿಕೊಳ್ಳುವುದು ಮುಂತಾದ ಸಂರಕ್ಷಣಾ ಚಟುವಟಿಕೆಗಳಲ್ಲಿ ನಾನು ತೊಡಗಿಸಿಕೊಂಡಿದ್ದೆ. ಮಳೆಯ ಕೊರತೆ ಮತ್ತು ನೀರಾವರಿ ಸೌಲಭ್ಯಗಳ ಕೊರತೆಯಿಂದಾಗಿ ಪೂರ್ವಜರು ಮಾಡಿಟ್ಟಿದ್ದ ಭೂಮಿಯಲ್ಲಿ ಯಾವುದೇ ಬೆಳೆಗಳನ್ನು ಬೆಳೆಲು ಸಾಧ್ಯವಾಗಲಿಲ್ಲ. 2016 ರಲ್ಲಿ ಭೂಮಿಯನ್ನು ಕಾಡನ್ನಾಗಿ ಪರಿವರ್ತಿಸಲು ನಿರ್ಧರಿಸಿದ್ದೆ. ಆರಂಭದಲ್ಲಿ ನನ್ನ ಕಲ್ಪನೆಗೆ ವಿರುದ್ಧವಾಗಿದ್ದ ನನ್ನ ಸ್ನೇಹಿತರು ಇದೀಗ ಆಗಾಗ್ಗೆ ಮಿನಿ ಅರಣ್ಯಕ್ಕೆ ಭೇಟಿ ನೀಡುತ್ತಿರುತ್ತಾರೆಂದು ಪ್ರದೀಪ್ ಅವರು ಹೇಳಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ 15,000 ಸಸಿಗಳನ್ನು ನೆಟ್ಟಿದ್ದೇನೆ. ಇದಕ್ಕಾಗಿ ಸುಮಾರು 16 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇನೆ. ಇದನ್ನು ಆದರ್ಶ ಜೀವವೈವಿಧ್ಯ ಉದ್ಯಾನವನವನ್ನಾಗಿ ಮಾಡಿ ಪ್ರಕೃತಿ ಪ್ರಿಯರಿಗೆ ಮುಕ್ತಗೊಳಿಸುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರದೀಪ್ ಉಗಲತ್ ಅವರು ತಮ್ಮ ಬಂಜರು ಭೂಮಿಯನ್ನು ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ವಿಶಿಷ್ಟವಾದ ಮಿನಿ-ಅರಣ್ಯವನ್ನಾಗಿ ಪರಿವರ್ತಿಸಿದ್ದಾರೆ ಅವರ ಧೈರ್ಯ, ದೃಢನಿಶ್ಚಯ ಮತ್ತು ಅವರ ಪತ್ನಿ ನೀಲಾಂಬಿಕಾ ಅವರ ಬೆಂಬಲದಿಂದಾಗಿ ಇದು ಸಾಧ್ಯವಾಗಿದೆ. ಅನೇಕ ಪರಿಸರವಾದಿಗಳು, ಪ್ರಕೃತಿ ಪ್ರಿಯರು, ಅರಣ್ಯಾಧಿಕಾರಿಗಳು ಮತ್ತು ವಿಜ್ಞಾನಿಗಳು ಕೂಡ ಇಂದು ಅವರ ಮಿನಿ-ಕಾಡಿಗೆ ಆಗಾಗ್ಗೆ ಭೇಟಿ ನೀಡುತ್ತಾರೆಂದು ಗದಗದ ಡಿಜಿಎಂ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಡಿ. ಸಮುದ್ರಿ ಅವರು ಹೇಳಿದ್ದಾರೆ.
ರೋಟರಿ ಸಹಾಯಕ ಪ್ರಾದೇಶಿಕ ಸಾರ್ವಜನಿಕ ಚಿತ್ರ ಸಂಯೋಜಕ ಡಾ. ಪ್ರಾಣೇಶ್ ಜಹಗೀರ್ದಾರ್ ಅವರು ಮಾತನಾಡಿ, 2008-09ರಲ್ಲಿ ನಾನು ಜಿಲ್ಲಾ ಗವರ್ನರ್ ಆಗಿದ್ದಾಗ ರೋಟರಿ ಕ್ಲಬ್‌ನ ಕಾರ್ಯದರ್ಶಿಯಾಗಿದ್ದ ಪ್ರದೀಪ್ ಅವರು, ಪ್ರಕೃತಿಯ ಮೇಲಿನ ಪ್ರೀತಿಯಿಂದಾಗಿ ಮಿನಿ-ಅರಣ್ಯವನ್ನು ಸ್ಥಾಪಿಸಿದರು. ನಾನು ಅವರ ಮಿನಿ-ಅರಣ್ಯ ಪ್ರದೇಶಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಪ್ರತಿ ಬಾರಿಯ ಭೇಟಿಯೂ ರೋಮಾಂಚಕಾರಿ ಅನುಭವವನ್ನು ನೀಡುತ್ತದೆ. ಹಸಿರು, ತಂಪಾದ ಗಾಳಿ ಮತ್ತು ಪಕ್ಷಿಗಳ ಚಿಲಿಪಿಲಿ ಪ್ರಕೃತಿ ಪ್ರಿಯರಿಗೆ ಒಂದು ರಸದೌತಣವ ನೀಡುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಆರ್‌ಜಿಯುಎಚ್‌ಎಸ್‌ನ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರೊ. ಬಂದೇನವಾಜ್ ರಾಮದುರ್ಗ ಅವರು ಮಾತನಾಡಿ, ಇಂತಹ ಮಿನಿ-ಅರಣ್ಯಗಳು ಇಂದು ಅಗತ್ಯವಾಗಿದೆ. ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು ಅಂತಹ ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.