ಬೆಂಗಳೂರು: ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧವಿದ್ದರೂ, ರಾಜ್ಯದ ಹಲವೆಡೆ ಇನ್ನೂ ತರಹೇವಾರಿ ಪಿಒಪಿ ಗಣಪತಿ ಮೂರ್ತಿಗಳು ಮಾರಾಟವಾಗುತ್ತಿರುವುದು ಕಂಡು ಬರುತ್ತಿದೆ.
ಇಲ್ಲಿಯವರೆಗೆ, ಬೆಂಗಳೂರಿನ ದಾಸರಹಳ್ಳಿ ವಲಯ ಮತ್ತು ಹುಬ್ಬಳ್ಳಿ ಎಂಬ ಎರಡು ಸ್ಥಳಗಳಲ್ಲಿ ಮಾತ್ರ ಅಧಿಕಾರಿಗಳು ದಾಳಿ ನಡೆಸಿದ್ದು, 1,000 ಮತ್ತು 180 ಪಿಒಪಿ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ಪಿಒಪಿ ಮೂರ್ತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿ ಒಂದು ವರ್ಷವಾಗಿದೆ. ಆದರೂ ಮಾರಾಟಗಾರರು ಮಾತ್ರ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ಮಾತ್ರ ನಿಲ್ಲಿಸಿಲ್ಲ.
ಕಳೆದ ಹಬ್ಬದ ಸಂದರ್ಭಧಲ್ಲಿ ಅಧಿಕಾರಿಗಳು ಎಲ್ಲಾ ವಿಗ್ರಹಗಳನ್ನು ವಶಪಡಿಸಿಕೊಂಡು ವೈಜ್ಞಾನಿಕವಾಗಿ ನಾಶಪಡಿಸಬೇಕಾಗಿತ್ತು. ಆದರೆ, ಅದು ಆಗಿರಲಿಲ್ಲ. ಇದೀಗ ಹಬ್ಬಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಅತ್ಯಲ್ಪ ತಪಾಸಣೆಗಳು ಪ್ರಾರಂಭವಾಗಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯಲ್ಲಿ ಕೆಲಸ ಮಾಡುತ್ತಿರುವ ಪರಿಸರ ತಜ್ಞರೊಬ್ಬರು ಹೇಳಿದ್ದಾರೆ.
ಕಳೆದ ಗುರುವಾರ, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರು ರಾಜ್ಯ ಸರ್ಕಾರದ 2023 ರ ನಿಷೇಧವನ್ನು ಪುನರುಚ್ಚರಿಸಿದ್ದರು. ಪಿ0ಪಿ ವಿಗ್ರಹಗಳ ಪರಿಶೀಲನೆ ನಡೆಸಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನ ನೀಡಿದ್ದರು. ಆದಾಗ್ಯೂ, ಮಾರಾಟಗಾರರು ಪಿಒಪಿ ಗಣೇಶ ಮೂರ್ತಿಗಳ ಮಾರಾಟವನ್ನು ಮುಂದುವರೆಸಿದ್ದಾರೆ.
ನಮ್ಮ ಬಳಿ ಹಳೆಯ ಸ್ಟಾಕ್‌ಗಳಿದ್ದು, ಅವುಗಳ ಮೇಲೆ ಹೂಡಿಕೆ ಮಾಡಲಾಗಿದೆ, ಅವುಗಳನ್ನು ಮಾರಾಟ ಮಾಡಲೇಬೇಕಿದೆ ಎಂದು ಮಾರಾಟಗಾರರು ಹೇಳಿದ್ದಾರೆ.
ಈ ವಿಗ್ರಹಗಳನ್ನು ಹಿಂದಿನ ವರ್ಷಗಳಲ್ಲಿ ತಯಾರಿಸಲಾಗಿತ್ತು. ಪ್ರತಿಯೊಂದಕ್ಕೂ ನಾನು ಹಣ ಪಾವತಿಸಿದ್ದೇನೆ. ಅವುಗಳನ್ನು ಸಮುದಾಯ/ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಕು. ಅವುಗಳನ್ನು ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ನಮಗೆ ಕನಿಷ್ಠ ಒಂದು ವರ್ಷದ ಸಮಯವನ್ನು ನೀಡಬೇಕು. ಹಬ್ಬಗಳಿಗೆ ಯಾರೂ ಸೆಕೆಂಡ್ ಹ್ಯಾಂಡ್ ವಿಗ್ರಹಗಳ ಖರೀದಿ ಮಾಡುವುದನ್ನು ಬಯಸುವುದಿಲ್ಲ ಎಂದು ಮೈಸೂರು ರಸ್ತೆಯ ಗಣೇಶ ಮೂರ್ತಿ ವ್ಯಾಪಾರಿ ಮಲ್ಲಪ್ಪ ಅವರು ಹೇಳಿದ್ದಾರೆ.
ಪಿಒಪಿ ವಿಗ್ರಹಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೆಲ ಘಟಕಗಳಿವೆ, ಆದರೆ, ಧಾರ್ಮಿಕ ಭಾವನೆಗಳಿಂದಾಗಿ ಯಾವುದೇ ವಿಗ್ರಹಗಳು ಇಲ್ಲಿಗೆ ಬರುವುದಿಲ್ಲ ಬಿಬಿಎಂಪಿಯ ತ್ಯಾಜ್ಯ ನಿರ್ವಹಣಾ ಅಧಿಕಾರಿ ಹೇಳಿದ್ದಾರೆ.
ಪಿಒಪಿ ವಿಗ್ರಹಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಎಲ್ಲರನ್ನು ವಶಪಡಿಸಿಕೊಳ್ಳಲು ಮಂಡಳಿಯು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ. ಆದರೆ, ಇದಕ್ಕೆ ಪೊಲೀಸರು ಮತ್ತು ಜಿಲ್ಲಾಡಳಿತ ಸಹಕರಿಸುತ್ತಿಲ್ಲ. ಜನರು ಕೂಡ ಅರ್ಥಮಾಡಿಕೊಳ್ಳಬೇಕು. ಖರೀದಿಯನ್ನು ನಿಲ್ಲಿಸಬೇಕು. ವಿಗ್ರಹಗಳು ಮತ್ತು ವಶಪಡಿಸಿಕೊಳ್ಳುವಿಕೆಗಳ ಬಗ್ಗೆ ನಮಗೆ ತಿಳಿದಿದೆ. ಜನರು ಮುಂದೆ ಬಂದು ಅಂತಹ ವಿಗ್ರಹಗಳನ್ನು ಎಲ್ಲಿ ನೋಡುತ್ತಾರೆ ಎಂಬುದರ ವಿವರಗಳನ್ನು ನೀಡಬೇಕು ಎಂದು ಕೆಎಸ್‌ಪಿಸಿಬಿಯ ಹಿರಿಯ ಪರಿಸರ ಅಧಿಕಾರಿ ಜಿ ಯತೀಶ್ ಅವರು ಹೇಳಿದ್ದಾರೆ.
ಕೆಎಸ್‌ಪಿಸಿಬಿ 2016 ರಲ್ಲಿ ಪಿಒಪಿ ವಿಗ್ರಹಗಳ ಬಳಕೆಯನ್ನು ನಿಷೇಧಿಸಿತು. ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2023 ರಲ್ಲಿ ಪಿಒಪಿ ವಿಗ್ರಹಗಳ ಮಾರಾಟ, ತಯಾರಿಕೆ ಮತ್ತು ಬಳಕೆಯನ್ನು ನಿಷೇಧಿಸುವ ಆದೇಶಗಳನ್ನು ಹೊರಡಿಸಿತು. ನಂತರ ಕರ್ನಾಟಕ ಸರ್ಕಾರವು ಆಗಸ್ಟ್ 2024 ರಲ್ಲಿ ಅವುಗಳನ್ನು ನಿಷೇಧಿಸುವ ಆದೇಶಗಳನ್ನು ಹೊರಡಿಸಿತು.
ಪರಿಸರ ಸ್ನೇಹಿ ವಿಗ್ರಹಗಳು ಮತ್ತು ಹಸಿರು ಪಟಾಕಿಗಳ ಮಾರಾಟ, ತಯಾರಿಕೆ ಮತ್ತು ಬಳಕೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತಗಳ ಅಡಿಯಲ್ಲಿ ಸಮಿತಿಗಳನ್ನು ರಚಿಸಲು ಮುಖ್ಯ ಕಾರ್ಯದರ್ಶಿ ಆದೇಶಗಳನ್ನು ಹೊರಡಿಸಿದ್ದರು.