ಬೆಂಗಳೂರು: ಮಾಗಡಿ ಶಾಸಕ ಹಾಗೂ ಡಿ.ಕೆ.ಶಿವಕುಮಾರ್ ಆಪ್ತ ಎಚ್.ಸಿ. ಬಾಲಕೃಷ್ಣ ಮತ್ತು ಅವರ ಪತ್ನಿ ರಾಧಾ ಸುಮಾರು 165 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 26.10 ಎಕರೆ ಸರ್ಕಾರಿ ಗೋಮಾಳ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
800 ಕೋಟಿ ರೂ ಮೌಲ್ಯದ 108 ಎಕರೆ ಸರ್ಕಾರಿ ಗೋಮಾಳ ಜಮೀನುಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ , ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಆಪ್ತರು ಸೇರಿದಂತೆ ಒಟ್ಟು 22 ಜನರ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಸರ್ವೇ ನಂಬರ್ 233, 234, 235 ಮತ್ತು 236ರ ಗೋಮಾಳ ಜಮೀನು. ಒಟ್ಟು 165 ಕೋಟಿ ರೂ ಮೌಲ್ಯದ 26 ಎಕರೆ ಗೋಮಾಳ ಜಮೀನು ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಪೈಕಿ 54 ಕೋಟಿ ರೂ ಮೌಲ್ಯದ 8 ಎಕರೆ ಜಮೀನು ಶಾಸಕ ಹೆಚ್ಸಿ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭೂ ಹಗರಣದ ಕುರಿತು ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2025ರ ಏಪ್ರಿಲ್ 3ರಂದು ಕೆಂಗೇರಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ 158 ರಲ್ಲಿ ಒಟ್ಟು 130.29 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ “ಸರ್ಕಾರಿ ಗೋಮಾಳ” ಪ್ರದೇಶವಾಗಿದೆ. ಪ್ರಸ್ತುತ ಕುರುಬರ ಹಳ್ಳಿ ಗ್ರಾಮದ ಪ್ರತೀ ಎಕರೆ ಜಮೀನಿಗೆ ಕನಿಷ್ಟ ಆರು ಕೋಟಿ ರೂ. ಗಳಿಗೂ ಅಧಿಕವಿದ್ದು, ಒಟ್ಟಾರೆ 130.29 ಎಕರೆ ವಿಸ್ತೀರ್ಣದ ಜಮೀನಿನ ಮಾರುಕಟ್ಟೆ ಬೆಲೆ ಸುಮಾರು 800 ಕೋಟಿ ರೂ. ಗಳಿಗೂ ಅಧಿಕವಾಗಿದೆ.
ಇಂತಹ ಅತ್ಯಮೂಲ್ಯ ಸರ್ಕಾರಿ ಸ್ವತ್ತಿನ ಮೇಲೆ ತಮ್ಮ ಕಾಕದೃಷ್ಟಿ ಬೀರಿರುವ ಪ್ರಭಾವಿ ಸರ್ಕಾರಿ ನೆಲಗಳ್ಳರು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಈ “ಸರ್ಕಾರಿ ಗೋಮಾಳ’ದ ಸ್ವತ್ತಿನಲ್ಲಿ ಸ್ವಲ್ಪ ಸ್ವಲ್ಪವೇ ಪ್ರಮಾಣದಲ್ಲಿ ಕಬಳಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಇಂತಹ ಪ್ರಭಾವಿ ಸರ್ಕಾರಿ ನೆಲಗಳ್ಳರ ಒತ್ತಡಗಳಿಂದಾಗಿ ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ: 158 ಕ್ಕೆ ಹೊಸದಾಗಿ ಸರ್ವೆ ನಂ: 233, 234, 235 ಮತ್ತು 236 ಎಂದು ಪೋಡಿ ಮಾಡಿ ಬದಲಾಯಿಸಲಾಗಿದೆ.
ಶಾಸಕ ಎಸ್.ಟಿ. ಸೋಮಶೇಖರ್ ಅವರ ಆರು ಆಪ್ತರಾದ ರಂಗಮ್ಮ, ವೆಂಕಟಮ್ಮ, ಬಿ.ವಿ. ಚಂದರ್ ರಾವ್, ಬಿ.ವಿ. ಮನೋಹರ್ ಬಾಬಡೆ, ಶಿವಣ್ಣ ಮತ್ತು ಅಬ್ದುಲ್ ಸತ್ತರ್ ಅವರು 110 ರೂ. ಕೋಟಿಗೂ ಹೆಚ್ಚು ಮೌಲ್ಯದ 18.10 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಭೂ ಹಗರಣಕ್ಕೆ ಸಹಕರಿಸಿದ ಆರೋಪದ ಮೇಲೆ ಕುರುಬರಹಳ್ಳಿ ಗ್ರಾಮದ ರಾಜಸ್ವ ನಿರೀಕ್ಷಕ ಮೋನಿಷ್, ಗ್ರಾಮ ಲೆಕ್ಕಿಗ (VA) ನಂಜೇಗೌಡ, ಬೆಂಗಳೂರು ದಕ್ಷಿಣ ತಾಲ್ಲೂಕಿನ ವಿಶೇಷ ತಹಸೀಲ್ದಾರ್ ಕೃಷ್ಣಮೂರ್ತಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಉಪ ವಿಭಾಗಾಧಿಕಾರಿ (AC) ಅಪೂರ್ವ ಬಿದರಿ ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸರ್ಕಾರಿ ಭೂ ಕಬಳಿಕೆ, ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ ಮತ್ತು ನಕಲಿ ದಾಖಲೆ ತಯಾರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ.