ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ಸಫಾರಿಗೆ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಪ್ರದೇಶದ ಸಫಾರಿಯನ್ನು ಪರಿಸರ ಸ್ನೇಹಿಯನ್ನಾಗಿಸಲು ಬನ್ನೇರುಘಟ್ಟ ಸಫಾರಿಗೆ ವಿದ್ಯುತ್ ಚಾಲಿತ ವಾಹನ ಬಳಕೆಗೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ವಾಹನಗಳಿಂದ ಹೆಚ್ಚುತ್ತಿರುವ ಇಂಗಾಲದ ಹೊರಹೊಮ್ಮುವಿಕೆ ತಡೆಯಲು ಅರಣ್ಯ ಇಲಾಖೆ ಪ್ರಯತ್ನ ಸಫಲವಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬನ್ನೇರುಘಟ್ಟ ಸಫಾರಿಯಲ್ಲಿ ಹೊಗೆ ರಹಿತ ವಾಹನ ಬಳಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಾಹಕ ಎವಿ ಸೂರ್ಯ ಸೇನ್ ಅವರು ಮಾತನಾಡಿ, ಇವಿ ಬಸ್ ಅನ್ನು ಒಂದು ತಿಂಗಳ ಪ್ರಾಯೋಗಿಕ ಆಧಾರದ ಮೇಲೆ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಸಫಾರಿ ವಾಹನಗಳಿಗೆ ಬಳಸುವ ಎಲೆಕ್ಟ್ರಿಕ್ ವಾಹನಗಳಿಗೆ ಇವಿ ಚಾರ್ಜಿಂಗ್ ಘಟಕ ಸ್ಥಾಪಿಸುವಂತೆ ಬಿಎಂಟಿಸಿಗೆ ಮನವಿ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಎಲ್ಲಾ ಸಫಾರಿ ವಾಹನಗಳನ್ನು ಹಂತ ಹಂತವಾಗಿ ಎಲೆಕ್ಟ್ರಿಕ್ ವಾಹನಗಳಾಗಿ ಬದಲಾಯಿಸಲಾಗುವುದು ಎಂದು ತಿಳಿಸಿದರು.
ಸಫಾರಿಯಲ್ಲಿ ಪ್ರಸ್ತುತ ಪ್ರಾಯೋಗಿದ ಆಧಾರದ ಮೇಲೆ ಇವಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿಯೊಂದು ಸಫಾರಿ ವಾಹನವು ಕನಿಷ್ಠ ಎಂಟು ಟ್ರಿಪ್‌ಗಳು ಕಾರ್ಯನಿರ್ವಹಿಸಲಿವೆ. ಈ ವೇಳೆ ವಾಹನಗಳ ಕಾರ್ಯಾಚರಣೆ, ಚಾರ್ಜಿಂಗ್ ಮತ್ತು ಇತರೆ ಸಮಸ್ಯೆಗಳ ಕುರಿತು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ. ಇದರಲ್ಲಿ ಯಶಸ್ವಿಯಾಗಿದ್ದೇ ಆದರೆ, ಎಲ್ಲಾ ವಾಹನಗಳನ್ನು ಬದಲಾಯಿಸಲಾಗುವುದು. ಇದರಿಂದ ಮೃಗಾಲಯದ ನಿರ್ವಹಣೆಯು ಆರ್ಥಿಕತೆಯನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.