ಬೆಂಗಳೂರು: ಜಾತಿ ಜನಗಣತಿ ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೇ ಹೊರತು ರಾಜ್ಯ ಸರ್ಕಾರಕ್ಕಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು ಶನಿವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿಯನ್ನು ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಕೇಂದ್ರ ಸರ್ಕಾರ ಅದನ್ನು ಮಾಡುತ್ತಿದೆ. ಹೀಗಾಗಿ, ಕರ್ನಾಟಕ ಸರ್ಕಾರ ಜಾತಿಗಣತಿ ನಡೆಸುವ ಅಗತ್ಯವಿಲ್ಲ. ಬದಲಿಗೆ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಲಿ ಎಂದು ಸಲಹೆ ನೀಡಿದರು.
ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ನಡೆಸುವ ಅಧಿಕಾರವಿಲ್ಲ. ಅದನ್ನು ನಡೆಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಜಾತಿ ಜನಗಣತಿ ನಡೆಸಲು ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರವು ಜನಗಣತಿ ನಡೆಸಲು ಯೋಜಿಸುತ್ತಿರುವುದರಿಂದ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಜನಗಣತಿ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ವೇಳೆ ವಿಪಕ್ಷಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿಗಣತಿಗೆ ಮುಂದಾಗಿದೆ ಎಂಬ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ.
ಜಾತಿಗಣತಿ ನಡೆಸುವ ನಿರ್ಧಾರ ಪ್ರಧಾನಿ ಮೋದಿಯವರ ಸ್ವಂತ ನಿರ್ಧಾರವಾಗಿದೆ. ರಾಹುಲ್ ಗಾಂಧಿಯವರ ಒತ್ತಡಕ್ಕೆ ಮಣಿದು ತೆಗೆದುಕೊಂಡ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ ಬಿಜೆಪಿ ಮತ್ತು ಜೆಡಿಎಸ್ ತಮ್ಮ ಪಕ್ಷವಾದ ಆರ್‌ಪಿಐ ಅನ್ನು ಮೈತ್ರಿಕೂಟದ ಭಾಗವಾಗಿ ಸೇರಿಕೊಳ್ಳುವಂತೆ ಹಾಗೂ ಕಾಂಗ್ರೆಸ್ ದುರಾಡಳಿತದ ವಿರುದ್ಧ ಹೋರಾಡುವಂತ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಖರ್ಗೆ ಒಬ್ಬ ಬಲಿಷ್ಠ ದಲಿತ ನಾಯಕ. ಅವರು ನನ್ನ ಉತ್ತಮ ಸ್ನೇಹಿತ ಕೂಡ ಹೌದು. ನಾವಿಬ್ಬರೂ ಸಂಸತ್ತಿನಲ್ಲಿ ಪರಸ್ಪರ ಭೇಟಿಯಾಗುತ್ತಲೇ ಇರುತ್ತೇವೆಂದು ಹೇಳಿದರು.
ಇದೇ ವೇಳೆ ಕಲಬುರಗಿಯಲ್ಲಿ ಬುದ್ಧವಿಹಾರ ಸ್ಥಾಪಿಸಿದ್ದಕ್ಕೆ ಖರ್ಗೆಯವರನ್ನು ಶ್ಲಾಘಿಸಿದರು. ಇದು ನಾಗಪುರದ ದೀಕ್ಷಾ ಭೂಮಿಯಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ನಾನು ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆ, ಈಗ ಎರಡು ಅವಧಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇನೆ, ರಾಜ್ಯಸಭಾ ಸದಸ್ಯನಾಗಿದ್ದೇನೆ. ನಾವೆಲ್ಲರೂ ಭಾರತೀಯರು ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉತ್ತಮ ಸೌಹಾರ್ದತೆಯಿಂದ ಇರಬೇಕು ಎಂದು ತಿಳಿಸಿದರು.
ರಾಜ್ಯ ಆರ್‌ಪಿಐ ಅಧ್ಯಕ್ಷ ಎಂ. ವೆಂಕಟಸ್ವಾಮಿ ಅವರು ಮಾತನಾಡಿ, ಒಂದು ವೇಳೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರೆ ಮುಂದಿನ ಮುಖ್ಯಮಂತ್ರಿಯಾಗಿ ದಲಿತ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುತ್ತಾರೆಂಬ ಭರವಸೆಯಿದೆ ಎಂದು ಹೇಳಿದರು.