ಬೆಂಗಳೂರು: ಬಿಎಂಟಿಸಿ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಇತ್ತೀಚೆಗೆ ಬಸ್ ಚಾಲಕರು ಹಾಗೂ ನಿರ್ವಾಹಕರ ಮೇಲೆ ಇಂತಹ ಹಲ್ಲೆ ಮತ್ತು ಅವಮಾನಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಕಿಡಿಗೇಡಿಗಳು ಪ್ರಾಣಕ್ಕೆ ಸಂಚಕಾರ ತರುವಂತಹ ಪ್ರಯತ್ನವನ್ನೂ ನಡೆಸಿದ್ದಾರೆ. ಚಾಕುವಿನಿಂದ ಹಲ್ಲೆ ಮಾಡಿದ ಘಟನೆಯೂ ಈ ಹಿಂದೆ ನಡೆದಿತ್ತು. ಹೀಗಾಗಿ, ಇಂತಹ ನಡೆಯನ್ನು ತಪ್ಪಿಸಲು ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ಯಾವುದೇ ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಹಿತರಕ್ಷಣೆ ನಮ್ಮ ಬದ್ಧತೆಯಾಗಿದ್ದು, ನಮ್ಮ ಇಲಾಖೆಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆ ಮತ್ತು ಅವಮಾನವನ್ನು ಸಹಿಸಲಾಗದು. ನಮ್ಮ ಸಿಬ್ಬಂದಿಯಿಂದ ಏನಾದರೂ ಪ್ರಮಾದವಾದರೆ, ದೂರು ನೀಡಿದ ಕೂಡಲೇ ವಿಚಾರಣೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕೂಡ ಮುಲಾಜಿಲ್ಲದೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ಕಾನೂನು ಮೀರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಹೀಗಾಗಿ, ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ತಕರಣಗಳು ಮರುಕಳಿಸದಂತೆ ತಡೆಯಲು ಶಾಶ್ವತ ಪರಿಹಾರವನ್ನು ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.
ಏನಿದು ಘಟನೆ...?
ಬಿಎಂಟಿಸಿ ಚಾಲಕ ಹುಸೇನ್ ಅವರು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬಸ್ ಚಲಾಯಿಸುತ್ತಿದ್ದರು. ಕಾವ್ಯಾ ಎಂಬ ಮಹಿಳೆ ಕೈಕೊಂಡ್ರಹಳ್ಳಿಗೆ ಟಿಕೆಟ್ ತೆಗೆದುಕೊಂಡಿದ್ದರು. ಕೈಕೊಂಡ್ರಹಳ್ಳಿ ತಲುಪುವ ಮುನ್ನ ಕಾವ್ಯಾ ತನ್ನ ಕಚೇರಿ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಕೇಳಿದ್ದಾರೆ. ಆದರೆ, ಅದು ನಿಲುಗಡೆ ಸ್ಥಳವಾಗಿರದ ಕಾರಣ ಚಾಲಕ ಹುಸೇನ್ ಬಸ್ ನಿಲ್ಲಿಸಲಿಲ್ಲ.
ಇದರಿಂದ ಕೋಪಗೊಂಡ ಕಾವ್ಯಾ, ಹುಸೇನ್ ಜೊತೆ ವಾಗ್ವಾದಕ್ಕಿಳಿದು ಕೆಟ್ಟದಾಗಿ ಮಾತನಾಡಿದ್ದು, ಇತರ ಪ್ರಯಾಣಿಕರ ಎದುರೇ ಹುಸೇನ್ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದರು