ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಜಿಲ್ಲೆಯ ನಿವೃತ್ತ ಹೆಡ್ ಕಾನ್‌ಸ್ಟೆಬಲ್ ನಿಂಗಪ್ಪ ವಿರುದ್ಧ ನಡೆಯುತ್ತಿರುವ ತನಿಖೆಯಲ್ಲಿ ದೊರೆತ ಸುಳಿವು ಆಧರಿಸಿ, ಲೋಕಾಯುಕ್ತ ಪೊಲೀಸರು ಮಾಜಿ ಪೊಲೀಸ್ ವರಿಷ್ಠಾಧಿಕಾರಿ (ಬೆಂಗಳೂರು ನಗರ ವಿಭಾಗ-1) ಶ್ರೀನಾಥ್ ಎಂ. ಜೋಶಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಮೂಲಗಳಿಂದ' ಮಾಹಿತಿ ಪಡೆದ ನಂತರ, ರಾಜ್ಯ ಸರ್ಕಾರಿ ಅಧಿಕಾರಿಗಳ ವಿರುದ್ಧ ನಡೆವ ಸಂಭವನೀಯ ದಾಳಿಗಳ ಬಗ್ಗೆ ಮಾಹಿತಿ ಸೋರಿಕೆ ಮಾಡಿ ಹಲವಾರು ಸರ್ಕಾರಿ ಅಧಿಕಾರಿಗಳಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇಲೆ ನಿಂಗಪ್ಪ ಅವರನ್ನು ಬಂಧಿಸಲಾಗಿದೆ.
ಆಗ್ನೇಯ ಬೆಂಗಳೂರಿನಲ್ಲಿರುವ ಐಪಿಎಸ್ ಅಧಿಕಾರಿಯ ನಿವಾಸದಲ್ಲಿ ನಡೆಸಿದ ಶೋಧದ ಸಂದರ್ಭದಲ್ಲಿ, ಲೋಕಾಯುಕ್ತ ಪೊಲೀಸರು 32,000 ರೂ. ನಗದು, ಕೆಲವು ಚಿನ್ನಾಭರಣಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆಗಾಗಿ ತಮ್ಮ ಮುಂದೆ ಹಾಜರಾಗುವಂತೆ ಜೋಶಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಶ್ರೀನಾಥ್ ಜೋಶಿ 2-3 ದಿನಗಳ ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಜೋಶಿ ನಿಂಗಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಇದು ಫೋನ್ ಕಾಲ್ ರೆಕಾರ್ಡ್ ನಲ್ಲಿ ಬಹಿರಂಗವಾಗಿದೆ.
ಚಿತ್ರದುರ್ಗದಲ್ಲಿರುವ ನಿಂಗಪ್ಪ ಅವರ ಮನೆಗೆ ಜೋಶಿ ಭೇಟಿ ನೀಡಿದ್ದರು ಎಂದು ಹೇಳಲಾಗಿದ್ದು, ಅಲ್ಲಿ ಅವರನ್ನು ಸನ್ಮಾನಿಸಲಾಯಿತು, ನಿಂಗಪ್ಪ ಬೆಂಗಳೂರಿನಲ್ಲಿರುವ ಐಪಿಎಸ್ ಅಧಿಕಾರಿಯ ಮನೆಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.
ಜೋಶಿ ಅವರನ್ನು ಕಳೆದ ವಾರ ಬೆಂಗಳೂರು ನಗರ-1 ರ ಲೋಕಾಯುಕ್ತ ಎಸ್‌ಪಿ ಹುದ್ದೆಯಿಂದ ರಿಲೀವ್ ಮಾಡಲಾಯಿತು. ಜೋಶಿ ಅವರನ್ನು ತಮ್ಮ ಮಾತೃ ಇಲಾಖೆಗೆ ಹಿಂತಿರುಗಿಸಬೇಕಾಗಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಸಂಸ್ಥೆಯಲ್ಲಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ್ದರಿಂದ ಅವರ ಜೋಶಿ ಅವರ ಕೋರಿಕೆಯ ಮೇರೆಗೆ ರಿಲೀವ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಿಂಗಪ್ಪ ತಮ್ಮ ಹೆಸರಿನಲ್ಲಿ ಮತ್ತು ಅವರ ಪತ್ನಿ ಮತ್ತು ಕೆಲವು ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ಹಲವಾರು ಕೋಟಿ ರೂಪಾಯಿಗಳನ್ನು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಅವರು ಎಂಟು ಕ್ರಿಪ್ಟೋಕರೆನ್ಸಿ ವಿನಿಮಯ ಸಂಸ್ಥೆಗಳಲ್ಲಿ 4.19 ಕೋಟಿ ರೂ. ಹೂಡಿಕೆ ಮಾಡಿದ್ದರುಎಂದು ತಿಳಿದು ಬಂದಿದೆ. ಇನ್ನೂ ಹಲವಾರು ವಿನಿಮಯ ಸಂಸ್ಥೆಗಳಲ್ಲಿ ಅವರು ಹೂಡಿಕೆ ಮಾಡಿದ ಹಣದ ವಿವರಗಳನ್ನು ಲೋಕಾಯುಕ್ತ ಪೊಲೀಸರು ಪಡೆಯಬೇಕಾಗಿದೆ.
ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ವೇಳೆ ಆರೋಪಿ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ಜೂನ್ 19ರಂದು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತು. ಮತ್ತೊಂದೆಡೆ, ನಿಂಗಪ್ಪ ಅವರ ಪತ್ನಿ ಚಂದ್ರಕಲಾ ಅವರು ತಮ್ಮ ಪತಿಯ ಬಂಧನ ಕಾನೂನುಬಾಹಿರ ಎಂದು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಪ್ರತಿಕ್ರಿಯೆ ಸಲ್ಲಿಸಲು ಲೋಕಾಯುಕ್ತ ಸಾರ್ವಜನಿಕ ಅಭಿಯೋಜಕರಿಗೆ ನಿರ್ದೇಶಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್, ಚಂದ್ರಕಲಾ ಅವರ ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.
ಮೇ 31 ರಂದು ರಾತ್ರಿ 9 ಗಂಟೆಗೆ ಲೋಕಾಯುಕ್ತ ಪೊಲೀಸರು ತಮ್ಮ ಮನೆಯನ್ನು ಶೋಧಿಸಿದರು. ರಾತ್ರಿ 9.30 ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮ ಪತಿಯನ್ನು ಬಂಧಿಸಲಾಯಿತು ಎಂದು ನಿಂಗಪ್ಪ ಅವರ ಪತ್ನಿ ಹೇಳಿದ್ದಾರೆ , ಎರಡು ದಿನಗಳವರೆಗೆ ಅವರು ಎಲ್ಲಿದ್ದಾರೆಂದು ತಿಳಿದಿರಲಿಲ್ಲ. ಜೂನ್ 2 ರಂದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು ಮತ್ತು ಮರುದಿನ ಅವರನ್ನು ನ್ಯಾಯಾಂಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಆದರೆ, ಲೋಕಾಯುಕ್ತ ಪೊಲೀಸರು ಜೂನ್ 2 ರಂದು ಸಂಜೆ 6.10 ಕ್ಕೆ ಬೆಂಗಳೂರಿನ ರಾಜಾಜಿನಗರದ ಮಾರುತಿ ಮೈದಾನದ ಬಳಿ ಅವರನ್ನು ಬಂಧಿಸಿ, ಸಂಜೆ 6.30 ಕ್ಕೆ ಲೋಕಾಯುಕ್ತ ಕಚೇರಿಗೆ ಕರೆತರಲಾಗಿದೆ ಎಂದು ರಿಮಾಂಡ್ ಮೆಮೊದಲ್ಲಿ ತೋರಿಸಿದ್ದಾರೆ.
ಮೇ 31 ರಿಂದ ಜೂನ್ 2 ರ ಸಂಜೆವರೆಗೆ ಯಾವುದೇ ಬಂಧನವನ್ನು ತೋರಿಸಲಾಗಿಲ್ಲ ಹಾಗೂ ಅವರ ಪತಿಗೆ ಯಾವುದೇ ಬಂಧನದ ಆಧಾರಗಳನ್ನು ನೀಡಲಾಗಿಲ್ಲ. ಆದ್ದರಿಂದ, ಬಂಧನ ಕಾನೂನುಬಾಹಿರವಾಗಿದೆ ಎಂದು ನಿಂಗಪ್ಪ ಅವರ ಪತ್ನಿ ಹೇಳಿದ್ದಾರೆ. ನಿಂಗಪ್ಪನನ್ನು ಬಂಧಿಸಿ ವಿಚಾರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆಯ ಹಿರಿಯ ಅಧಿಕಾರಿಗಳೇ ನಿಂಗಪ್ಪ ಜೊತೆಗೆ ಶಾಮೀಲಾಗಿದ್ದಾರೆಂಬ ಮಾಹಿತಿ ದೊರಕಿದೆ.