ಬೆಂಗಳೂರು: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.
ಪ್ಯಾರಿಸ್ ಪ್ರವಾಸ ಮುಗಿಸಿ ಅಮೆರಿಕಕ್ಕೆ ತೆರಳಲು ಅವರಿಗೆ ಅನುಮತಿ ನಿರಾಕರಿಸಿದೆ. ಇದರಿಂದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿದ್ದ ಪ್ರಿಯಾಂಕ್ ಖರ್ಗೆಗೆ ನಿರಾಸೆಯಾಗಿದ್ದು, ಕ್ಲಿಯರೆನ್ಸ್ ನೀಡದ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸದ್ಯ ಪ್ಯಾರಿಸ್ ನಲ್ಲಿ ಇರುವ ಪ್ರಿಯಾಂಕ್ ಖರ್ಗೆ, ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಬಳಿಕ ಅಮೆರಿಕದಲ್ಲಿ ನಡೆಯುತ್ತಿರುವ ಬಯೋ ಇಂಟರ್ ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಐಟಿ ಬಿಟಿಗೆ ಸಂಬಂಧಪಟ್ಟಂತೆ ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಅವರು ಭಾಗವಹಿಸಬೇಕಿತ್ತು.
IAS ಅಧಿಕಾರಿಗಳಿಗೆ ಅನುಮತಿ: ಸಚಿವರ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗಳಿಗೆ ಯುಎಸ್ಗೆ ತೆರಳಲು ಅನುಮತಿ ಸಿಕ್ಕಿದೆ. ಆದ್ರೆ, ಪ್ರಿಯಾಂಕ್ ಖರ್ಗೆ ಅವರಿಗೆ ಅನುಮತಿ ನಿರಾಕರಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಏಕೆ ಅನುಮತಿ ಕೊಟ್ಟಿಲ್ಲ ಎನ್ನುವುದರ ಬಗ್ಗೆ ಕಾರಣ ತಿಳಿದುಬಂದಿಲ್ಲ. ಅಮೆರಿಕಗೆ ತೆರಳಲು ಕ್ಲಿಯರೆನ್ಸ್ ದೊರೆಯದಿರುವುದಕ್ಕೆ ಪ್ರಿಯಾಂಕ್ ಖರ್ಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ವಿವರಣೆ ನೀಡುವಂತೆ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸದ್ಯಕ್ಕೆ ನಾನು ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದನ್ನು ತಡೆಹಿಡಿದಿದ್ದೇನೆ. ಬೆಂಗಳೂರಿಗೆ ಮರಳಿದ ನಂತರ ಅನುಮತಿ ನಿರಾಕರಣೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟ ವಿವರಣೆಯನ್ನು ಕೇಳುತ್ತೇನೆ ಎಂದು ತಿಳಿಸಿದ್ದಾರೆ.