ಹುಬ್ಬಳ್ಳಿ: ತುಂಟತನ ಮಾಡಿದ್ದಕ್ಕಾಗಿ ತಾಯಿಯೊಬ್ಬಳು ತಾನೇ ಹೆತ್ತ ಮಗನಿಗೆ ಕಬ್ಬಿಣದ ರಾಡ್ ನಿಂದ ಕೈ. ಕಾಲು ಮತ್ತು ಕುತ್ತಿಗೆ ಮೇಲೆ ಬರೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮಗುವಿಗೆ ಬರೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಅನುಷಾ ಹುಲಿಮಾರ ಬಂಧಿತ ಮಹಿಳೆ. ಸೋಮವಾರ ಹಳೆ ಹುಬ್ಬಳ್ಳಿ ಪಟ್ಟಣದ ಟಿಪ್ಪು ನಗರದಲ್ಲಿ ನಾಲ್ಕನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ತನ್ನ ಮಗುವಿನ ವರ್ತನೆಯಿಂದ ಕೋಪಗೊಂಡು ಕ್ರೂರ ಶಿಕ್ಷೆ ನೀಡಿದ್ದಾಳೆ ಎಂದು ವರದಿಯಾಗಿದೆ.
ಅನುಷಾ ತನ್ನ ಮಗುವಿನ ಕೈಕಾಲುಗಳು ಮತ್ತು ಕುತ್ತಿಗೆಗೆ ಕಬ್ಬಿಣದ ಬಿಸಿ ರಾಡ್‌ನಿಂದ ತೀವ್ರ ಸುಟ್ಟ ಗಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಗುವಿನ ಕೂಗು ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಬಾಲಕನನ್ನು ರಕ್ಷಿಸಿದ್ದಾರೆ. ಅಮಾನವೀಯ ಕೃತ್ಯದಿಂದ ಆಘಾತಕ್ಕೊಳಗಾದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಹಳೆ ಪಟ್ಟಣ ಹುಬ್ಬಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂತ್ರಸ್ತ ಮಗುವಿಗೆ ಅಗತ್ಯ ಬೆಂಬಲ ಮತ್ತು ಆರೈಕೆ ನೀಡುವಂತೆ ಕೋರಲಾಗಿದೆ. ಮಗು ತನ್ನ ಕಾಲು, ಕೈಗಳು ಮತ್ತು ಮುಖದ ಮೇಲೆ ತೀವ್ರವಾದ ಸುಟ್ಟ ಗಾಯಗಳನ್ನು ತೋರಿಸುತ್ತಿರುವುದು ಮತ್ತು ತನ್ನ ತಾಯಿ ತನಗೆ ಬರೆ ಹಾಕಿದ್ದಾರೆ ಜನರಿಗೆ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.