ವಸತಿ ಯೋಜನೆಯಲ್ಲಿ 2137.44 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡವರ ಮನೆಗೆ ಕನ್ನ ಹಾಕಿದ ಕಾಂಗ್ರೆಸ್ನವರು ಉತ್ತರ ಕೊಡಬೇಕು. ಬಡವರ ಹಣವನ್ನು ತಿಂದ ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ವೋಟ್ಗಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಕಾಂಗ್ರೆಸ್ ರಾಜ್ಯದಲ್ಲಿ ವಸತಿ ನೀಡುತ್ತಿದೆ. ನಾವು ಹೇಳುವುದು ಸುಳ್ಳಾದರೆ ತನಿಖೆಯನ್ನು ಸಿಬಿಐಗೆ ವಹಿಸಿ ಸತ್ಯಾಂಶ ಬಯಲಾಗಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಟಿಪ್ಪು ಸಿದ್ಧಾಂತದ ಸರ್ಕಾರ. ಈ ಸರ್ಕಾರ ತನಿಖೆ ನಡೆಸುವ ನಂಬಿಕೆ ನಮಗಿಲ್ಲ ಎಂದು ಅಶೋಕ್ ಹೇಳಿದ್ದಾರೆ.
ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ರಾಮನಗರದ ಸುಳಿವರ ಗ್ರಾಮದಲ್ಲಿ ನಡೆದಿದೆ. ಹಸುವಿನ ಮಾಲೀಕ ಮರಿ ಬಸವಯ್ಯ ನೀಡಿದ ದೂರಿನ ಆಧಾರದ ಮೇಲೆ, ಆರೋಪಿ ಗುರುಸಿದ್ದಪ್ಪ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಬಿಎನ್‌ಎಸ್‌ನ ಇತರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಾವರೆಕೆರೆ ಪೊಲೀಸರು ತಿಳಿಸಿದ್ದಾರೆ. ರಕ್ತಸ್ರಾವವಾಗುತ್ತಿರುವ ಹಸುವನ್ನು ಗಮನಿಸಿದ ದಾರಿಹೋಕರು ಅದರ ಮಾಲೀಕರು ಮತ್ತು ಪಶುವೈದ್ಯರಿಗೆ ಮಾಹಿತಿ ನೀಡಿದರು. ಚಿಕಿತ್ಸೆಯ ಹೊರತಾಗಿಯೂ, ಶುಕ್ರವಾರ ಮಧ್ಯಾಹ್ನ ಹಸು ಸಾವನ್ನಪ್ಪಿದೆ. ಶವಪರೀಕ್ಷೆ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಭಾಷಾ ವಿವಾದ ಉಂಟಾಗಿದ್ದು, ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಹೊರಡಿಸಿರುವ ದ.ಕ ಜಿಲ್ಲಾ ಪಂಚಾಯತ್ ಸುತ್ತೋಲೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸುತ್ತೋಲೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದು, ಸರ್ಕಾರದ ಆದೇಶಕ್ಕೆ ಪ್ರತಿಯಾಗಿ, ಇನ್ಮುಂದೆ ತುಳು ಭಾಷೆಯಲ್ಲೇ ಸಭೆಯಲ್ಲಿ ಮಾತನಾಡುವುದಾಗಿ ತುಳು ಹೋರಾಟಗಾರರು ಹೇಳಿದ್ದಾರೆ. ಸರ್ಕಾರಿ ಆದೇಶವನ್ನು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ತುಳು ಭಾಷೆ - ಕನ್ನಡ ನಾಡಿನ ಮಣ್ಣಿನ ಭಾಷೆ. ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವುದಾದರೆ, ಉರ್ದು ಭಾಷೆಯ ಬಳಕೆ ಸರಕಾರೀ ಕಡತದಲ್ಲಿ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.
ಮಾವಿನ ಬೆಲೆ ನಿರಂತರವಾಗಿ ಕುಸಿಯುತ್ತಿರುವುದರಿಂದ ತೊಂದರೆಗೀಡಾಗಿರುವ ಕರ್ನಾಟಕದ ರೈತರಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ದೊಡ್ಡ ಪರಿಹಾರ ನೀಡಿದ್ದಾರೆ.ಮಾವಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಲೆಗಳಲ್ಲಿನ ವ್ಯತ್ಯಾಸದ ವೆಚ್ಚವನ್ನು ಭರಿಸುತ್ತಿದ್ದು, ಅದನ್ನು ರೈತರಿಗೆ ಪಾವತಿಸಲು ನಿರ್ಧರಿಸಿವೆ. ರೈತರಿಗೆ 2.5 ಲಕ್ಷ ಮೆಟ್ರಿಕ್ ಟನ್ ಮಾವಿನಹಣ್ಣಿನ ಬೆಲೆ ವ್ಯತ್ಯಾಸವನ್ನು ಸರಿದೂಗಿಸಲು ಕೇಂದ್ರ- ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ಇದಕ್ಕೂ ಮೊದಲು, ಕರ್ನಾಟಕ ಸರ್ಕಾರ ಭಾರತ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಕರ್ನಾಟಕದ ಬಹುತೇಕ ಕಡೆ ಮುಂಗಾರು ದುರ್ಬಲವಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಹೆಚ್ಚಾಗಿದ್ದು, ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.