ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ರಾಷ್ಟ್ರಗಳ ನಡುವಿನ ಯುದ್ಧ ತೀವ್ರವ ಸ್ವರೂಪ ಪಡೆದುಕೊಂಡಿದ್ದು, ಯುದ್ಧದಿಂದಾಗಿ ವಿದ್ಯಾಭ್ಯಾಸಕ್ಕೆ ತೆರಳಿದ್ದ ರಾಜ್ಯದ ವಿದ್ಯಾರ್ಥಿಗಳು ಇರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ತವರಿಗೆ ವಾಪಸ್ಸಾಗಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ 16 ವಿದ್ಯಾರ್ಥಿಗಳ ತಂಡ ಇರಾನ್ ನಿಂದ ಆಗಮಿಸಿದೆ.
ಗೌರಿಬಿದನೂರು ತಾಲೂಕಿನ ಅಲೀಪುರದಿಂದ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಇರಾನ್ ದೇಶಕ್ಕೆ ತೆರಳಿದ್ದರು. ಯುದ್ದದಿಂದಾಗಿ ಅವರು ಇರಾನ್ ದೇಶದ ಟೆಹ್ರಾನ್ ಬಳಿ ಸಿಲುಕಿಕೊಂಡಿದ್ದರು. ಭಾರತಕ್ಕೆ ತಮ್ಮ ಮಕ್ಕಳನ್ನ ಕರೆತರುವಂತೆ ಪೋಷಕರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಇದರಂತೆ ಇರಾನ್ ಸರ್ಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯದಿಂದ ನಿನ್ನೆ ಗೌರಿಬಿದನೂರಿನ 16 ಜನ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಇನ್ನು ತಾಯ್ನಾಡಿಗೆ ವಾಪಸ್ಸಾದ ಬಳಿಕ ಇರಾನ್ ನಲ್ಲಿನ ಯುದ್ಧದ ಭೀಕರತೆಯನ್ನು ವಿದ್ಯಾರ್ಥಿಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇರಾನ್‌ನಿಂದ ಸ್ಥಳಾಂತರಗೊಂಡ ವಿದ್ಯಾರ್ಥಿಗಳ ತಂಡದಲ್ಲಿ ಗೌರಿಬಿದನೂರಿನ ಸೈಯದ್ ಕೂಡ ಒಬ್ಬರಾಗಿದ್ದಾರೆ.
ತಮಗಾದ ಅನುಭವವನ್ನು ಹಂಚಿಕೊಂಡಿರುವ ಸೈಯದ್ ಅವರು, ಶುಕ್ರವಾರ ಸಂಜೆ ಇರಾನ್‌ನಲ್ಲಿ ಕತ್ತಲೆ ಆವರಿಸಿತ್ತು. ಅದು ನಗರವು ಎದುರಿಸಿದ ಅತ್ಯಂತ ಕರಾಳ ರಾತ್ರಿಗಳಲ್ಲಿ ಒಂದಾಗಿದೆ. ಜೂನ್ 13 ರಂದು ಸಂಜೆ 3:30 ಈ ದಿನ ಹಾಗೂ ಸಮಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಮ್ಮ ವಸತಿ ನಿಲಯದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿ ಕ್ಷಿಪಣಿಗಳು ಬಿದ್ದಿದ್ದವು. ಗುಡುಗಿನಂತೆ ದೊಡ್ಡ ಶಬ್ಧ ಕೇಳಿ ಬಂದಿತ್ತು. ಮೊದಲಿಗೆ ಏನಾಯಿತು ಎಂದು ನಮಗೆ ತಿಳಿದಿರಲಿಲ್ಲ. ಅದು ಕ್ಷಿಪಣಿ ದಾಳಿ ಎಂದು ತಿಳಿದಾಗ, ನಡುಗಿ ಹೋದೆವು ಎಂದು ಶಾಹಿದ್ ಬೆಹೆಶ್ತಿ ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್ ಎಂಬಿಬಿಎಸ್ ವಿದ್ಯಾರ್ಥಿ ಅಲಿಪುರದ ಸೈಯದ್ ಮೊಹ್ಸಿನ್ ರಝಾ ಅವರು ಹೇಳಿದ್ದಾರೆ.
ಕ್ಷಿಪಣಿ ದಾಳಿ 1 ಕಿ.ಮೀ ದೂರದಲ್ಲಿ ನಡೆಸಿದ್ದರೂ, ತೀವ್ರ ಶಬ್ಧಕ್ಕೆ ನಾವಿದ್ದ ಸ್ಥಳದಲ್ಲಿದ್ದ ಕಟ್ಟಡಗಳ ಕಿಟಕಿಗಳು ಒಡೆದು ಹೋಗಿದ್ದವು. ಕಟ್ಟಡಗಳ ಗೋಡೆಗಳು ನಡುಗಿದ್ದವು. ಎಲ್ಲವನ್ನೂ ನೋಡಿದೆವು. ಕ್ಷಿಪಣಿ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನೋಡಿದೆವು. ಟೆಹ್ರಾನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಹತ್ತಿರದಲ್ಲಿತ್ತು, ಆದರೆ, ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ದೂರವಾಣಿ ಮೂಲಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆವು. ಪರಿಸ್ಥಿತಿ ಹದಗೆಡುತ್ತಿದ್ದಂತೆ ನಾವು ಅವರಿಗೆ ಕರೆ ಮಾಡಿ ಸಹಾಯ ಕೇಳಿದೆವು ಎಂದು ತಿಳಿಸಿದ್ದಾರೆ.
ಟೆಹ್ರಾನ್‌ನ 6 ನೇ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಸೈಯದಾ ಫೈಝ್ ಜೈನಾಬ್ ಅವರು ಮಾತನಾಡಿ, 15 ದಿನಗಳ ಕಾಲ ಆಹಾರ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ನಾವು ವಸತಿ ನಿಲಯದಿಂದ ಹೊರಗೆ ಹೋಗಿರಲಿಲ್ಲ. ಸಣ್ಣ ಶಬ್ಧ ಕೇಳಿ ಬಂದರೂ ಜೀವ ಉಳಿಸಿಕೊಳ್ಳಲು ನೆಲಮಾಳಿಗೆಗೆ ಓಡಿ ಹೋಗಿ ಅಡಗಿಕೊಳ್ಳುತ್ತಿದ್ದೆವು. ನಾವಿದ್ದ ಕಟ್ಟಡದ ಸುತ್ತಲೂ ಬಾಂಬ್ ದಾಳಿ ಮತ್ತು ಸ್ಫೋಟದ ಶಬ್ಧ ಕೇಳಿ ಬರುತ್ತಿತ್ತು. ಕೆಲವು ದಿನಗಳ ನಂತರ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ತುಂಬಾ ಭಯಾನಕವಾಗಿತ್ತು. ನಮ್ಮ ಕುಟುಂಬಗಳನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗಲಿಲ್ಲ. ಬದುಕಿ ಬರುವ ವಿಶ್ವಾಸವೇ ಇಲ್ಲದಂತಾಗಿತ್ತು. ಇದೇ ನಮ್ಮ ಜೀವನದ ಕೊನೆಯ ರಾತ್ರಿ ಎಂದು ಭಾವಿಸಿದ್ದೆವು ಎಂದು ಹೇಳಿದ್ದಾರೆ.
ಶನಿವಾರ ವೇಳೆಗೆ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತ್ತು. ಸ್ಫೋಟಗಳ ಶಬ್ಧಕ್ಕೆ, ಭಯಕ್ಕೆ ನಿದ್ರೆ ಬರುತ್ತಿರಲಿಲ್ಲ. ನಂತರ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿ, ಟೆಹ್ರಾನ್‌ನಿಂದ ವಿದ್ಯಾರ್ಥಿಗಳನ್ನು ಕೋಮ್ ಮತ್ತು ಯಾಜ್ದ್ ನಗರಗಳಿಗೆ ಸ್ಥಳಾಂತರಿಸಿತು. ನಮಗೆ ಊಟ ಮತ್ತು ವಸತಿ ಸೌಕರ್ಯಗಳನ್ನು ಒದಗಿಸಿದರು. ಎರಡು ಮೂರು ದಿನಗಳ ನಂತರ, ಕೋಮ್‌ನಲ್ಲಿಯೂ ಪರಿಸ್ಥಿತಿ ಹದಗೆಡುತ್ತಿತ್ತು. "ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಮಷಾದ್‌ಗೆ ಸ್ಥಳಾಂತರಿಸಲು ನಿರ್ಧರಿಸಿತು. ಒಂದು ಅಥವಾ ಎರಡು ರಾತ್ರಿಗಳ ನಂತರ, ಅವರು ನಮ್ಮನ್ನು ಸ್ಥಳಾಂತರಿಸಲು ನಿರ್ಧರಿಸಿದರು ಎಂದು ತಿಳಿಸಿದ್ದಾರೆ.
ಗಡಿಯ ಮೂಲಕ ನಮ್ಮನ್ನು ಸ್ಥಳಾಂತರಿಸಬಹುದು ಎಂದು ನಮಗೆ ಮೊದಲು ಮಾಹಿತಿ ನೀಡಿದ್ದರು, ಆದರೆ ಕೆಲವು ಸಮಸ್ಯೆಗಳು ಎದುರಾಗಿತ್ತು. ನಂತರ ವಾಯುಪ್ರದೇಶವನ್ನು ಮತ್ತೆ ತೆರೆದ ನಂತರ ನಮ್ಮನ್ನು ವಿಮಾನದ ಮೂಲಕ ಕರೆದೊಯ್ಯಲಾಯಿತು. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ನಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ನಡೆಸಿಕೊಂಡರು, ನಮಗೆ ಬೇಕಾದ ಎಲ್ಲವನ್ನೂ ಒದಗಿಸಿದರು, ನಮ್ಮನ್ನು ರಕ್ಷಣೆ ಮಾಡಿದರು ಎಂದು ಹೇಳಿದ್ದಾರೆ.
ಅಧಿಕಾರಿಗಳು 24/7 ನಮ್ಮನ್ನು ನೋಡಿಕೊಂಡರು. ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ... ಈಗ ನಾವು ನಮ್ಮ ತಾಯ್ನಾಡಿನಲ್ಲಿ ಸುರಕ್ಷಿತರಾಗಿದ್ದೇವೆ, ಆದರೆ ನಮ್ಮ ಶಿಕ್ಷಣ ಸ್ಥಗಿತಗೊಳ್ಳಬಾರದು ಮತ್ತು ಇರಾನ್ ಸರ್ಕಾರವು ನಮ್ಮ ಶಿಕ್ಷಣವನ್ನು ಇಲ್ಲಿಂದ ಪೂರ್ಣಗೊಳಿಸಲು ನಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರದ ಎನ್‌ಆರ್‌ಐ ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ಮಾತನಾಡಿ, ಕರ್ನಾಟಕದ ಸುಮಾರು 40 ರಿಂದ 50 ವಿದ್ಯಾರ್ಥಿಗಳು ಇರಾನ್ ತೊರೆದಿದ್ದಾರೆ. ಈ ಪೈಕಿ 22 ರಿಂದ 25 ವಿದ್ಯಾರ್ಥಿಗಳು ಗೌರಿಬಿದನೂರಿನವರಾಗಿದ್ದರೆ, ಉಳಿದವರು ಅಲಿಪುರ, ಚಿಕ್ಕಬಳ್ಳಾಪುರ, ಟಿ. ನರಸೀಪುರ, ಮೈಸೂರು ಮತ್ತು ಬೆಂಗಳೂರಿನವರಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಇರಾನ್‌ನಲ್ಲಿರುವ ಸುಮಾರು 150 ಜನರು ಇನ್ನೂ ಹಿಂತಿರುಗಿಲ್ಲ. ಅವರನ್ನು ಬ್ಯಾಚ್‌ಗಳಲ್ಲಿ ಮರಳಿ ಕರೆತರಲಾಗುತ್ತಿದೆ, ಸೋಮವಾರ ಎರಡು ವಿಮಾನಗಳಲ್ಲಿ ಮತ್ತಷ್ಟು ಜನರು ತಾಯ್ನಾಡಿಗೆ ವಾಪಸ್ಸಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.