ಸಚಿವ ಕೆ.ಜೆ.ಜಾರ್ಜ್ 
ರಾಜ್ಯ

ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಇಲ್ಲ: ಸಚಿವ ಕೆ.ಜೆ ಜಾರ್ಜ್

ಈ ಬಾರಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ್ದರಿಂದ ಕೃಷಿ, ನೀರಾವರಿ ಮತ್ತು ತೋಟಗಾರಿಕೆ ಪ್ರದೇಶ ವಿಸ್ತರಣೆಯಾಗಿದೆ. ಜನವರಿಯಿಂದಲೇ ತಾಪಮಾನ, ಒಣ ಹವೆ ಹೆಚ್ಚಳದಿಂದ ಗೃಹ ಬಳಕೆ ವಿದ್ಯುತ್ ಪ್ರಮಾಣ ಏರಿಕೆಯಾಗಿದೆ.

ಬೆಂಗಳೂರು: ಬೇಸಿಗೆಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಸಿದ್ಧವಾಗಿದ್ದು, ಯಾವುದೇ ಸಂದರ್ಭದಲ್ಲೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಹೇಳಿದ್ದಾರೆ.

ಬೇಸಿಗೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಎಸ್ಕಾಂಗಳ ಅಧ್ಯಕ್ಷರು ಸೇರಿದಂತೆ ಇಂಧನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಶುಕ್ರವಾರ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ್ದರಿಂದ ಕೃಷಿ, ನೀರಾವರಿ ಮತ್ತು ತೋಟಗಾರಿಕೆ ಪ್ರದೇಶ ವಿಸ್ತರಣೆಯಾಗಿದೆ. ಜನವರಿಯಿಂದಲೇ ತಾಪಮಾನ, ಒಣ ಹವೆ ಹೆಚ್ಚಳದಿಂದ ಗೃಹ ಬಳಕೆ ವಿದ್ಯುತ್ ಪ್ರಮಾಣ ಏರಿಕೆಯಾಗಿದೆ. ಕಳೆದ ವರ್ಷ ಜನವರಿಗೆ ಹೋಲಿಸಿದರೆ ಶೇ.15 (ಎರಡು ಸಾವಿರ ಮೆ.ವಾ)ರಷ್ಟು ಬಳಕೆ ಹೆಚ್ಚಳ ಕಂಡು ಬಂದಿದೆ. ವಿದ್ಯುತ್ ಬೇಡಿಕೆ, ಬಳಕೆ ಹೆಚ್ಚಿಸಿದಷ್ಟು ಉದ್ಯಮ-ವಹಿವಾಟು, ಆರ್ಥಿಕತೆ ವೃದ್ಧಿಸಿ ಜನರು ಹಾಗೂ ರಾಜ್ಯದ ಖಜಾನೆಗೆ ಆದಾಯ ಹೆಚ್ಚುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯಾದರೂ ಸಂಗ್ರಹಣೆಗೆ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್‌ ಸ್ಟೋರೇಜ್‌ ಮೂಲಕ 2000 ಮೆ.ವ್ಯಾ. ವಾರಾಹಿ ಪಂಪ್ಡ್‌ ಸ್ಟೋರೇಜ್‌ ಮೂಲಕ 1600 ಮೆ.ವ್ಯಾ. ಪಾವಗಡದಲ್ಲಿ 1000 ಮೆ.ವ್ಯಾ. ಸಾಮರ್ಥ್ಯ ಹಾಗೂ ರ‍್ಯಾಪ್ಟೆಯಲ್ಲಿ 2000 ಮೆ.ವ್ಯಾ. ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್‌ ಯೋಜನೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್‌ ಕೊರತೆಯಾಗದಂತೆ ನೋಡಿಕೊಳ್ಳಬಹುದು.

ಕೆಪಿಸಿಎಲ್​ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ 3,300 ಮೆ.ವ್ಯಾ, ಜಲ ವಿದ್ಯುತ್ ಘಟಕಗಳಲ್ಲಿ 2,000 ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗಿದೆ. ಅದೇ ರೀತಿ ಯುಪಿಸಿಎಲ್ ನಿಂದ 1,260 ಮೆ.ವ್ಯಾ. ಸೋಲಾರ್ ಮೂಲಕ 6,655 ಮೆ.ವ್ಯಾ. ಪವನ ಮೂಲಕ 1,940 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದಲ್ಲದೆ, ಸಿಜಿಎಸ್ (ಸೆಂಟ್ರಲ್ ಜೆನರೇಟಿಂಗ್ ಸ್ಟೇಷನ್ಸ್)ನಿಂದ 6,183 ಮೆ. ವ್ಯಾ ವಿದ್ಯುತ್ ಬಂದಿದ್ದರೆ, ಕೇಂದ್ರ ಗ್ರಿಡ್​​ನಿಂದ 600 ಮೆಗಾವ್ಯಾಟ್ ವಿದ್ಯುತ್ ಖರೀದಿಸಲಾಗಿದೆ. ಪಂಜಾಬ್ ಮತ್ತು ಉತ್ತರಪ್ರದೇಶದಿಂದ ವಿನಿಮಯ ಆಧಾರದ ಮೇಲೆ 700 ಮೆಗಾ ವ್ಯಾಟ್ ವಿದ್ಯುತ್ ಪಡೆಯಲಾಗಿದೆ.

ಇದಲ್ಲದೆ, ವಿದ್ಯುತ್ ಬೇಡಿಕೆ ಪೂರೈಸಲು ಶನಿವಾರ (ಮಾ.1) ಕೂಡ್ಗಿಯಿಂದ ಹೆಚ್ಚುವರಿಯಾಗಿ 310 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತದೆ. ಜತೆಗೆ ಬೇಡಿಕೆ ಆಧರಿಸಿ ವಿನಿಮಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ ದಿನಕ್ಕೆ 100 ರಿಂದ 1,275 ಮೆ. ವ್ಯಾ ಮತ್ತು ಪಂಜಾಬ್‌ನಿಂದ 300 ಮೆ. ವ್ಯಾ ವಿದ್ಯುತ್ ತೆಗೆದುಕೊಳ್ಳಲಾಗುವುದು. ಅಲ್ಲದೆ, ಜೂನ್ ಮೊದಲ ವಾರದವರೆಗೆ ಪ್ರತಿನಿತ್ಯ 1000 ಮೆ. ವ್ಯಾ ವಿದ್ಯುತ್ ಖರೀದಿಸಲಾಗುವುದು. ಒಟ್ಟಾರೆ ವಿದ್ಯುತ್ ಲಭ್ಯತೆ ಹಾಗೂ ಬೇಡಿಕೆ ನಡುವಣ ಕೊರತೆ ನಿಭಾಯಿಸಲು ಜನವರಿಯಿಂದ ವಿದ್ಯುತ್ ಬ್ಯಾಂಕಿಂಗ್ ಮತ್ತು ಖರೀದಿ ಆರಂಭಿಸಲಾಗಿದೆ. ದೀರ್ಘಾವಧಿ ವಿನಿಮಯದಡಿ ಎರಡರಿಂದ ಮೂರು ತಿಂಗಳ ಅವಧಿಗೆ ಪ್ರತಿದಿನ ಸದ್ಯಕ್ಕೆ 600 ಮೆ.ವಾ. ವಿದ್ಯುತ್ ಖರೀದಿಸುತ್ತಿದ್ದು, ಶನಿವಾರ (ಮಾ.1)ದಿಂದ ಒಂದು ಸಾವಿರ ಮೆ. ವಾ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಕೆಲವು ಸಬ್ ಸ್ಟೇಷನ್​ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿ ಓವರ್ ಲೋಡ್ ಆಗುತ್ತಿದೆ. ಇನ್ನು ಕೆಲವು ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದು, ಅಂಡರ್ ಲೋಡ್ ಆಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಅಂಡರ್ ಲೋಡ್ ಇರುವ ಉಪಕೇಂದ್ರಗಳಿಂದ ಓವರ್ ಲೋಡ್ ಇರುವ ಉಪಕೇಂದ್ರಗಳಿಗೆ ವಿದ್ಯುತ್ ಒದಗಿಸಲು ಲಿಂಕ್ ಲೈನ್ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಕೆಲವು ಕಡೆ ಲಿಂಕ್ ಲೈನ್ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.

ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದ್ದರೂ ಅದರ ಪ್ರಸರಣ ಮತ್ತು ವಿತರಣೆಯೇ ಸಮಸ್ಯೆಯಾಗಿದೆ. ಇದನ್ನು ತಪ್ಪಿಸಲು ಸಬ್ ಸ್ಟೇಷನ್​ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 100 ಹೊಸ ಸಬ್ ಸ್ಟೇಷನ್​​ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮುಂದಿನ ಎರಡು ವರ್ಷದಲ್ಲಿ ಪ್ರಸರಣ ಮತ್ತು ವಿತರಣೆಯಲ್ಲಿ ಇರುವ ಸಮಸ್ಯೆಗಳನ್ನು ಬಹುತೇಕ ಬಗೆಹರಿಸಲು ಕ್ರಮ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಸರಾಸರಿ ಶೇ.13 ವಿತರಣಾ ನಷ್ಟವಿದೆ ಎಂದು ಹೇಳಿದರು.

ಗೃಹ ಬಳಕೆಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಬೇಕು ಎಂಬ ಉದ್ದೇಶದಿಂದ ಸಿಂಗಲ್ ಫೇಸ್ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ನಿರಂತರ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ಅಲ್ಲದೆ, ತೋಟದ ಮನೆಗಳಲ್ಲಿ ವಾಸಿಸುವವರ ಅನುಕೂಲಕ್ಕಾಗಿ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ, ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ ಸಂದರ್ಭದಲ್ಲಿ ರೈತರು ಕನ್ವರ್ಟರ್‌ಗಳನ್ನು ಬಳಸಿ ಕೃಷಿ ಪಂಪ್‌ಸೆಟ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಟ್ರಿಪ್ ಆಗಿ ಇಡೀ ಪ್ರದೇಶದಲ್ಲೇ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನರು ತೊಂದರೆಗೊಳಗಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಗೆ ಕನ್ವರ್ಟರ್ ಅಳವಡಿಸಿ ಐಪಿ ಸೆಟ್​​ಗಳನ್ನು ಬಳಸಬಾರದು ಎಂದು ಮನವಿ ಮಾಡಿದರು.

ಗ್ರಾಹಕರಿಂದ ವಿದ್ಯುತ್ ಶುಲ್ಕ ಸಂಗ್ರಹಿಸಿಸುವ ಚೆಸ್ಕಾಂ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿ, ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದ ಸೆಸ್ಕ್ (ಚೆಸ್ಕಾಂ) ವಾಣಿಜ್ಯ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕರಿಗೆ ನೋಟಿಸ್‌ ನೀಡುವಂತೆ ಸೂಚಿಸಲಾಗಿದೆ. ಎಲ್ಲಾ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ್ದೇನೆ. ಈ ವೇಳೆ ಮುಖ್ಯವಾಗಿ ಎಸ್ಕಾಂಗಳಿಗೆ ಇಂಧನ ಇಲಾಖೆಯಿಂದ ವಿದ್ಯುತ್‌ ಕೊರತೆ ಉಂಟಾಗುತ್ತಿದೆಯೇ? ಸಬ್ಸಿಡಿ ಹಣ ಬಿಡುಗಡೆಯಲ್ಲಿ ವಿಳಂಬವಾಗಿದೆಯೇ? ಎಂದು ಪ್ರಶ್ನೆ ಮಾಡಿದ್ದೇನೆ. ಜೊತೆಗೆ ಸಭೆಯಲ್ಲಿದ್ದ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ, ‘ಸರ್ಕಾರ ಸಬ್ಸಿಡಿ ಹಣ ನೀಡದಿದ್ದರೆ ಗ್ರಾಹಕರಿಂದ ವಸೂಲಿ ಮಾಡುವುದಾಗಿ ಯಾಕೆ ಕೆಇಆರ್‌ಸಿಗೆ ಪ್ರಸ್ತಾವನೆ ಕಳುಹಿಸಿದ್ದೀರಿ’ ಎಂದೂ ಪ್ರಶ್ನಿಸಿದ್ದೇನೆ ಎಂದು ಹೇಳಿದರು. ಇದಕ್ಕೆ ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ‘ನನ್ನ ಗಮನಕ್ಕೆ ಬಾರದೆ ವಾಣಿಜ್ಯ ವಿಭಾಗದ ಪ್ರಧಾನ ವ್ಯವಸ್ಥಾಪಕರು ಈ ರೀತಿ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ಕಳುಹಿಸಿದ್ದಾರೆ’ ಎಂದು ಹೇಳಿದ್ದಾರೆ. ಹೀಗಾಗಿ ಅವರಿಗೆ ನೋಟಿಸ್‌ ನೀಡಿ ವಿವರಣೆ ಪಡೆಯಲು ತಿಳಿಸಿದ್ದೇನೆಂದು ಹೇಳಿದರು.

ಸರ್ಕಾರ ಸಬ್ಸಿಡಿ ಹಣ ಬಿಡುಗಡೆ ಮಾಡದಿದ್ದರೆ ಗ್ರಾಹಕರಿಂದ ಸಂಗ್ರಹಿಸುವುದಾಗಿ ಚೆಸ್ಕಾಂ ಅವರು ಪ್ರಸ್ತಾವನೆ ಕಳುಹಿಸಿದ್ದಾರೆ. ನಾವು ಮುಂಗಡವಾಗಿಯೇ ಸಬ್ಸಿಡಿ ಹಣ ಪಾವತಿಸುತ್ತಿದ್ದೇವೆ. ಹೀಗಾಗಿ ಗ್ರಾಹಕರಿಂದ ವಸೂಲಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಆದರೂ ಈ ರೀತಿ ಪ್ರಸ್ತಾವನೆ ಗೊಂದಲ ಉಂಟು ಮಾಡುವುದರಿಂದ ವಿವರಣೆ ಕೇಳಿ ನೋಟಿಸ್‌ ನೀಡುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿದ ಅವಘಡದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆರ್‌ಟಿಪಿಎಸ್ ಒಂದನೇ ಘಟಕದ ಬಂಕರ್ ಕುಸಿದು ಎರಡೂವರೆ ವರ್ಷ ಸಮೀಪಿಸಿದೆ. ನವೀಕರಣ ಹಾಗೂ ಆಧುನೀಕರಣಕ್ಕೆ ಎರಡು ಬಾರಿ ಟೆಂಡರ್ ಕರೆದರೂ ಯಾರೊಬ್ಬರು ಮುಂದೆ ಬಂದಿಲ್ಲ. ಪರ್ಯಾಯ ಪರಿಹಾರದ ಬಗ್ಗೆ ತಜ್ಞರ ಜತೆ ಚರ್ಚೆ ಪ್ರಗತಿಯಲ್ಲಿದೆ. ಆರ್‌ಟಿಪಿಎಸ್ ನಾಲ್ಕನೇ ಘಟಕದ ಬಾಯ್ಲರ್ ಕೊಳವೆ ಮಾರ್ಗಗಳು ಬೆಂದ, ಕರಗಿದ ಕಾರಣಗಳ ಬಗ್ಗೆ ತಜ್ಞರ ಉನ್ನತ ಸಮಿತಿ ತಪಾಸಣೆ ನಡೆಸಿ ವರದಿ ಸಲ್ಲಿಸಿದೆ. ಈ ತಂಡ ಸೂಚಿಸಿದಂತೆ ರಿಪೇರಿಗೆ ಚಾಲನೆ ನೀಡಿದ್ದು, ಮಾರ್ಚ್ ಅಂತ್ಯಕ್ಕೆ ಪುನಾರಂಭವಾಗಲಿದೆ ಎಂದು ಹೇಳಿದರು.

ರಾಜ್ಯದ ಸರ್ಕಾರಿ ಸಂಸ್ಥೆಗಳು ಇಂಧನ ಇಲಾಖೆಗೆ ಒಟ್ಟು 9,000 ಕೋಟಿ ರೂ.ಗಳನ್ನು ನೀಡಬೇಕಿದ್ದು, ಈ ಪೈಕಿ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಬರೋಬ್ಬರಿ 2,329 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಬಾಕಿ ಪಾವತಿಯನ್ನು ಪರಿಹರಿಸಲು ಮತ್ತು ಸರ್ಕಾರಿ ಇಲಾಖೆಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ವಿದ್ಯುತ್ ಉತ್ಪಾದನೆಯನ್ನು ವಿಕೇಂದ್ರೀಕರಣಗೊಳಿಸಲು ಮತ್ತು ಅನೇಕ ಸ್ಥಳಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಕುರಿತು ಮಾತುಕತೆ ನಡೆಸಲಾಗುತ್ತಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಸೌರ ಫಲಕಗಳನ್ನು ಅಳವಡಿಸಿಕೊಳ್ಳಲಿದ್ದು, ನ್ಯಾಯಾಲಯದ ಆದೇಶವನ್ನು ಅನುಸರಿಸಿ, ಬಾಕಿ ಪಾವತಿಸದಿದ್ದರೆ ವಿದ್ಯುತ್ ಸರಬರಾಜು ನಿಲ್ಲಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

SCROLL FOR NEXT