ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಕುರಿತು ವಿಡಂಬನಾತ್ಮಕ ನಾಟಕ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು ಪ್ರಕರಣ ರದ್ದು ಮಾಡಿದೆ.
ಹೌದು.. ಜೈನ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದ್ದು, ವಿಡಂಬನಾತ್ಮಕ ನಾಟಕಕ್ಕೆ ಸಂವಿಧಾನದ ಆರ್ಟಿಕಲ್ 19 ರಕ್ಷಣೆಯಿದೆ. ನಾಟಕದಲ್ಲಿ ದಲಿತ ದೌರ್ಜನ್ಯದ ಉದ್ದೇಶವಿರಲಿಲ್ಲ ಎಂದು ಅಭಿಪ್ರಾಯುಪಟ್ಟಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿ, ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡುವುದು "ಕಾನೂನು ಪ್ರಕ್ರಿಯೆಯ ದುರುಪಯೋಗ" ಕ್ಕೆ ಸಮನಾಗಿರುತ್ತದೆ ಎಂದು ಹೇಳಿದೆ.
ಏನಿದು ಪ್ರಕರಣ?
ಲಾಲ್ ಬಾಗ್ ರಸ್ತೆಯಲ್ಲಿರುವ ಜೈನ್ ಯೂನಿವರ್ಸಿಟಿಯ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಯೂತ್ ಫೆಸ್ಟ್ ಅಂಗವಾಗಿ ಫೆಬ್ರವರಿ 6ರಂದು ಆಯೋಜಿಸಲಾಗಿದ್ದ ಸ್ಕಿಟ್ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ನಾಟಕದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಬಳಸಿದ್ದ ಕೆಲ ಪದಗಳು ದಲಿತ ಸಂಘಟನೆಗಳನ್ನ ಕೆರಳಿಸಿತ್ತು. ಫೆ. 6ರಂದು ಕಾಲೇಜಿನ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮ್ಯಾಡ್ ಆ್ಯಡ್ ಪ್ರದರ್ಶನದಲ್ಲಿ ಅಂಬೇಡ್ಕರ್ ಹಾಗೂ ದಲಿತರ ಬಗ್ಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಬಿ ಆರ್ ಅಂಬೇಡ್ಕರ್ ಅಲ್ಲ, ಬಿಯರ್ ಅಂಬೇಡ್ಕರ್, ಡೋಂಟ್ ಟಚ್ ಮಿ, ಟಚ್ ಮಿ’ ಅಂತ ಸಾಂಗ್ ಪ್ಲೇ ಮಾಡಿ ಗೇಲಿ ಮಾಡಿದ್ದಲ್ಲದೇ, ನೀವು ಡಿ-ಲಿಟ್ ಆಗಿರುವಾಗ ದಲಿತರಾಗಿರಲು ಕಾರಣವೇನು’ ಎಂದು ವಿವಾದಾತ್ಮಕ ಸ್ಕಿಟ್ ಪ್ರದರ್ಶನ ಮಾಡಿದ್ದರು. ಈ ವಿವಾದದ ಕಿಚ್ಚು ಹೆಚ್ಚಾಗ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ, ಬೇಷರತ್ ಕ್ಷಮೆಯಾಚಿಸಿತ್ತು.
ಅಷ್ಟು ಮಾತ್ರವಲ್ಲ ಶಿಸ್ತುಪಾಲನ ಕಮಿಟಿಯಿಂದಲೂ ಸ್ಕಿಟ್ ಪ್ರದರ್ಶನ ಮಾಡಿದ್ದ 6 ವಿದ್ಯಾರ್ಥಿಗಳನ್ನ ಅಮಾನತು ಮಾಡಲಾಗಿತ್ತು. ಅಂತೆಯೇ ಈ ವಿಚಾರವಾಗಿ ಪ್ರಿನ್ಸಿಪಾಲ್ಸೇರಿದಂತೆ 6 ಜನರ ವಿರುದ್ಧ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಫೆ.11 ರಂದು ಎಫ್ಐಆರ್ ದಾಖಲಾಗಿತ್ತು. ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣಾಧಿಕಾರಿ ದೂರು ಹಿನ್ನೆಲೆ ಎಫ್ಐಆರ್ ದಾಖಲಿಸಲಾಗಿತ್ತು.