ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಸಿಲಿನ ತಾಪ ಏರಿಕೆಯಾಗುತ್ತಿದೆ, ಹೀಗಾಗಿ ಬತ್ತಿ ಹೋಗಿರುವ ತೊರೆಗಳು, ಕೊಳಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಮೂಲಕ ಕಾಡುಪ್ರಾಣಿಗಳ ದಾಹ ನೀಗಿಸುವ ಪ್ರಯತ್ನ ನಡೆಯುತ್ತಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ದಮ್ಮನಕಟ್ಟೆ ಮತ್ತು ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ 200 ಕ್ಕೂ ಹೆಚ್ಚು ಕೆರೆಗಳನ್ನು ಹೊಂದಿದ್ದು, ಇವುಗಳಲ್ಲಿ ಸುಮಾರು 80 ರಷ್ಟು ಸಣ್ಣ ಜಲಮೂಲಗಳು ಬತ್ತಿ ಹೋಗಿದ್ದು, ಕಾಡು ಪ್ರಾಣಿಗಳು ನೀರನ್ನು ಹುಡುಕುತ್ತಾ ಕಾಡಿನಿಂದ ಹೊರಬರುತ್ತಿವೆ. ಹೀಗಾಗಿ ಕಾಡ್ಗಿಚ್ಚಿನ ಮೇಲೆ ನಿಗಾ ಇಟ್ಟಿರುವ ಅರಣ್ಯ ಸಿಬ್ಬಂದಿಯ ಆತಂಕ ಹೆಚ್ಚಿಸಿದೆ. ಇದೀಗ ಕೆರೆಗಳನ್ನು ತುಂಬಿಸಲು ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುತ್ತಿದ್ದಾರೆ.
ಅರಣ್ಯದೊಳಗೆ ಸೌರಶಕ್ತಿ ಬಳಸಿ ಬೋರ್‌ವೆಲ್‌ಗಳನ್ನು ವಿದ್ಯುದ್ದೀಕರಿಸಿದ್ದರೂ, ನೀರಿನ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ. ಆನೆ, ಹುಲಿ, ಕಾಡೆಮ್ಮೆ, ಸಾಂಬಾರು, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳು ಹೆಚ್ಚಿರುವ ಅರಣ್ಯದೊಳಗಿನ ಕೆರೆಗಳನ್ನು ತುಂಬಿಸಲು ಅರ್ಧ ಡಜನ್‌ಗೂ ಹೆಚ್ಚು ಟ್ಯಾಂಕರ್ ಗಳಿಂದ ನೀರು ತರಿಸಲಾಗುತ್ತಿದೆ.
ದಮ್ಮನಕಟ್ಟೆ ಮತ್ತು ವೀರನಹೊಸಹಳ್ಳಿ ವ್ಯಾಪ್ತಿಗೆ ನದಿ ಇಲ್ಲದೇ ಇರುವುದರಿಂದ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆಯ ಅವಧಿಯಲ್ಲಿ ನೀರು ಸಾಕಾಗದೇ ಮಳೆ ನೀರು ಸಂಗ್ರಹಣೆಯನ್ನೇ ಅವಲಂಬಿಸಬೇಕಾಗಿದೆ.
ಪ್ರಾಣಿಗಳ ಬಾಯಾರಿಕೆಯನ್ನು ನೀಗಿಸಲು ಪ್ರಮುಖ ಕೆರೆಗಳನ್ನು ತುಂಬಲು ಕೆರೆಗಳ ಹೂಳು ತೆಗೆಯಲು ಮತ್ತು ಸೋಲಾರ್ ಬೋರ್‌ವೆಲ್‌ಗಳನ್ನು ಸ್ಥಾಪಿಸಲು ಇಲಾಖೆ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.
ಸಫಾರಿಯಲ್ಲಿ ಪ್ರತಿನಿತ್ಯ ಹುಲಿಗಳು ನೀರಿನ ಹೊಂಡಗಳ ಬಳಿ ಕಾಣಿಸಿಕೊಳ್ಳುತ್ತವೆ. ವಿವಿದೆಡೆ ಕಾಡು ಪ್ರಾಣಿಗಳ ದೃಶ್ಯ ವೈರಲ್ ಆಗಿರುವುದರಿಂದ ಜನರು ಸಫಾರಿಗಾಗಿ ಜನರು ಮುಗಿಬೀಳುತ್ತಿದ್ದಾರೆ ಎಂದು ಸಫಾರಿ ವಾಹನ ಚಾಲಕ ಸಿದ್ದು ತಿಳಿಸಿದ್ದಾರೆ.
ನೀರಿನ ಕೊರತೆಯು ಮಾನವ-ಪ್ರಾಣಿ ಸಂಘರ್ಷದ ಘಟನೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕಾಗಿ ಅರಣ್ಯ ಸಿಬ್ಬಂದಿ ಆದ್ಯತೆಯ ಮೇಲೆ ನೀರಿನ ಗುಂಡಿಗಳನ್ನು ತುಂಬಲು ಪ್ರಯತ್ನಿಸುತ್ತಿದ್ದಾರೆ.
ರಾಷ್ಟ್ರೀಯ ಉದ್ಯಾನದ ಎರಡೂ ಕಡೆಗಳಲ್ಲಿ ಬಹುತೇಕ ಕೆರೆಗಳಲ್ಲಿ ಕಡಿಮೆ ನೀರಿದೆ, ಕೆಲವೆಡೆ ಪೂರ್ಣವಾಗಿ ಬತ್ತಿ ಹೋಗಿವೆ. ವನ್ಯಜೀವಿಗಳಿಗೆ ತೊಂದರೆಯಾಗದಂತೆ ಕೆರೆಗಳನ್ನು ತುಂಬಿಸಲು ಹೆಚ್ಚಿನ ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಲಾಗುವುಗು ಎಂದು ನಾಗರಹೊಳೆ ಡಿಸಿಎಫ್ ಸೀಮಾ ತಿಳಿಸಿದ್ದಾರೆ. ಪ್ರವಾಸಿ ವಲಯದ ದಮ್ಮನಕಟ್ಟೆಯಲ್ಲಿ ಹೆಚ್ಚು ಕೆರೆಗಳು ಬತ್ತಿ ಹೋಗಿದ್ದು, ನೀರಿನ ಹೊಂಡಗಳ ಬಳಿ ಪ್ರಾಣಿಗಳು ಕಾಣಿಸಿಕೊಳ್ಳಲು ಇದು ಕಾರಣವಾಗಿದೆ ಎಂದು ಅವರು ಹೇಳಿದರು.
ಮುಂಗಾರು ಪೂರ್ವ ಮಳೆಯು ರಾಷ್ಟ್ರೀಯ ಉದ್ಯಾನವನದ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. 2015-16ರಲ್ಲಿ ನೀರಿನ ಕೊರತೆಯಿಂದ ಯಾವುದೇ ಪ್ರಾಣಿಗಳ ಸಾವು ಸಂಭವಿಸಿಲ್ಲ ಎಂದು ಅರಣ್ಯ ಅಧಿಕಾರಿಗಳು ಸಮರ್ಥಿಸಿಕೊಂಡರು.