ನವದೆಹಲಿ: ಸಿಎಂ ಸಿದ್ದರಾಮಯ್ಯ 2025-26 ನೇ ಸಾಲಿನ ಬಜೆಟ್ ಮಂಡಿಸಿದ್ದು, ಮುಸ್ಲಿಂ ಸಮುದಾಯಕ್ಕೆ ನೀಡಿರುವ ಕೊಡುಗೆಗಳ ಭಾರಿ ಚರ್ಚೆಯಾಗುತ್ತಿದೆ.
ಮಸೀದಿ ಇಮಾಮ್‌ಗಳ ಗೌರವಧನ ಹೆಚ್ಚಳ- ವಕ್ಪ್ ಸಂಸ್ಥೆಗಳ ಜೀರ್ಣೋದ್ಧಾರ ಸೇರಿದಂತೆ ಒಟ್ಟು 4,700 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಜೆಟ್ ನ್ನು ಬಿಜೆಪಿ ಟೀಕಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿ ಅವರಿಗೆ ಹೇಳೋದಕ್ಕೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮೀರ್ ಅಹ್ಮದ್ ಖಾನ್, ಗ್ಯಾರೆಂಟಿ ಹೊರೆಯ ನಡುವೆಯೂ ಸಿದ್ದರಾಮಯ್ಯ 4 ಲಕ್ಷ 9 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದು ಮುಸ್ಲಿಂ ಬಜೆಟ್ ಎಂಬ ಬಿಜೆಪಿ ಟೀಕೆಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಇದು ಮುಸ್ಲಿಂ ಬಜೆಟ್ ಹೇಗೆ ಆಗಲು ಸಾಧ್ಯ? ರಾಜ್ಯದ ಒಟ್ಟು ಜನಸಂಖ್ಯೆಯ ಶೇ.14 ರಷ್ಟು ಮುಸ್ಲಿಂ ಸಮುದಾಯದವರಿದ್ದಾರೆ.
ನಮ್ಮ ಜನಸಂಖ್ಯೆಯ ಪ್ರಕಾರ ನೋಡೋಕೆ ಹೋದರೆ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ 60,000 ಕೋಟಿ ರೂಪಾಯಿಗಳನ್ನು ಕೊಡಬೇಕಿತ್ತು. ಆದರೆ ಕೊಟ್ಟಿರುವುದು ಕೇವಲ 4,700 ಕೋಟಿಯಷ್ಟೇ ಬಿಜೆಪಿಯವರಿಗೆ ಅಷ್ಟೂ ಕಾಮನ್ ಸೆನ್ಸ್ ಇಲ್ವಾ? ಎಂದು ಪ್ರಶ್ನಿಸಿರುವ ಜಮೀರ್ ಅಹ್ಮದ್ ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.