ಬೆಂಗಳೂರು: ಇತ್ತೀಚೆಗೆ ಹಂಪಿಯಲ್ಲಿ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಭದ್ರತಾ ಕ್ರಮಗಳನ್ನು ಗಣನೀಯವಾಗಿ ಬಲಪಡಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಭಾನುವಾರ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಅವರ ಸುರಕ್ಷತೆ ಖಾತ್ರಿಗೆ ಮಾಡಬೇಕಾದ ಮತ್ತು ಮಾಡಬಾರದ ಬಗ್ಗೆ ವಿವರಿಸಲಾಗುವುದು. ಖಂಡಿತವಾಗಿಯೂ ಹಂಪಿ ಮತ್ತಿತರ ಪ್ರವಾಸಿ ಸ್ಥಳಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಿದ್ದೇವೆ. ಈಗ ಇರುವ ಭದ್ರತಾ ಕ್ರಮಗಳನ್ನು ಸರ್ಕಾರ ಮರುಪರಿಶೀಲಿಸಲಿದೆ ಎಂದರು.
ಇಸ್ರೇಲಿ ಪ್ರಜೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ "ಒಂದೆಡೆ ನಾವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಈ ರೀತಿಯ ಘಟನೆಗಳು ಪ್ರವಾಸಿಗರನ್ನು ನಮ್ಮ ದೇಶಕ್ಕೆ ಭೇಟಿ ನೀಡುವುದನ್ನು ತಡೆಯುತ್ತವೆ ಎಂದು ಅವರು ಹೇಳಿದರು.
ಮಾರ್ಚ್ 6ರಂದು ತುಂಗಭದ್ರ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಲ್ಲದೆ ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಪ್ರಕರಣ ಸಂಬಂಧ ಮರುದಿನ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ವಿವರ ಪಡೆದುಕೊಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಡಿವೈಎಸ್‌ಪಿ ನೇತೃತ್ವದ ಪೊಲೀಸರ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಈಗಾಗಲೇ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಓರ್ವ ಆರೋಪಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಆತನನ್ನೂ ಬಂಧಿಸಲಾಗುವುದು ಎಂದರು.